ಜಮ್ಮು-ಕಾಶ್ಮೀರ: ಸುಮಾರು 15 ದಿನಗಳ ಬಳಿಕ ಶ್ರೀನಗರದಲ್ಲಿ ಸುಮಾರು 190 ಶಾಲೆಗಳು ಸೋಮವಾರ ಪುನರಾರಂಭಗೊಂಡಿದ್ದವು. ಆದರೆ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಹಾಜರಾಗಿದ್ದರೆ, ವಿದ್ಯಾರ್ಥಿಗಳು ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿ ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರಕಾರ ಘೋಷಿಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಪರಿಸ್ಥಿತಿ ಅವಲೋಕನದ ಬಳಿಕ ಹಂತ, ಹಂತವಾಗಿ ಶ್ರೀನಗರದಲ್ಲಿ ನಿರ್ಬಂಧವನ್ನು ಸಡಿಲಿಸಿ ಶಾಲೆಗಳನ್ನು ಪುನರಾರಂಭಿಸಲಾಗುತ್ತಿದೆ.
ಜಿಲ್ಲೆಯ ಶಾಲೆಗಳ ಮುಖ್ಯಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಶ್ರೀನಗರದ ಡೆಪ್ಯುಟಿ ಕಮಿಷನರ್ ಡಾ.ಶಾಹಿದ್ ಇಕ್ಬಾಲ್ ಸಭೆ ನಡೆಸಿ, ಸೋಮವಾರದಿಂದ ಶಾಲಾ ಆರಂಭಿಸುವಂತೆ ಮಾತುಕತೆ ನಡೆಸಿದ್ದರು. ಆದರೆ ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮಾತ್ರ ತೀರಾ ಕಡಿಮೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಯಾವುದೇ ಖಾಸಗಿ ಶಾಲೆಗಳು ಆರಂಭಗೊಂಡಿಲ್ಲ. ಕೇವಲ ಬೇಮಿನಾದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ ಮತ್ತು ಕೆಲವು ಕೇಂದ್ರೀಯ ವಿದ್ಯಾಲಯಗಳು ಮಾತ್ರ ಪುನರಾರಂಭಗೊಂಡಿದೆ ಎಂದು ವರದಿ ತಿಳಿಸಿದೆ.
ಪರಿಸ್ಥಿತಿ ಇನ್ನೂ ತುಂಬಾ ಭಯದಿಂದ ಹಾಗೂ ಅನಿಶ್ಚಿತತೆಯಿಂದ ಕೂಡಿದೆ, ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದು ಪೋಷಕರಾದ ಫಾರೂಖ್ ಅಹ್ಮದ್ ದಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
*ಶ್ರೀನಗರದಲ್ಲಿ 900 ಶಾಲೆಗಳಿದ್ದು, ಕೇವಲ 196 ಶಾಲೆಗಳು ಮಾತ್ರ ಸೋಮವಾರ ಪುನರಾರಂಭ.
*ಶ್ರೀನಗರದಲ್ಲಿನ ಯಾವುದೇ ಖಾಸಗಿ ಶಾಲೆಗಳು ತೆರೆದಿಲ್ಲ
*ಶ್ರೀನಗರದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಮತ್ತು ಕೆಲವು ಕೇಂದ್ರೀಯ ವಿದ್ಯಾಲಯ ಮಾತ್ರ ಪುನರಾರಂಭ.