ಹೊನ್ನಾಳಿ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಜನಪರ ಕೆಲಸ ಮಾಡುತ್ತಿರುವುದನ್ನು ಹಾಗೂ ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಂಗ್ರೆಸ್ ಮುಖಂಡರಿಗೆ ಸಹಿಸಲಾಗುತ್ತಿಲ್ಲ. ಭ್ರಮ ನಿರಸನಗೊಂಡು ಅಸೂಯೆಯಿಂದ ಇಲ್ಲ ಸಲ್ಲದ ಆರೋಪಗಳನ್ನು ಶಾಸಕರ ವಿರುದ್ಧ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ತಾಲೂಕಿನ ಕೋವಿಡ್ ಸೋಂಕಿತರಿಗೆ ಎಲ್ಲಾ ಸಹಕಾರ-ಸಹಾಯವನ್ನು ಶಾಸಕರು ನೀಡುತ್ತಿದ್ದಾರೆ. ಅವರ ಅದ್ಭುತ ಕೆಲಸಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಶಹಬ್ಟಾಶ್‌ಗಿರಿ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇಂತಹ ಸಮಯದಲ್ಲಿ ಇಂಧನಗಳ ಬೆಲೆ ಏರಿಕೆ ಪ್ರತಿಭಟನೆ ನೆಪದಲ್ಲಿ ಕಾಂಗ್ರೆಸ್ ಮುಖಂಡರು ಬೆಲೆ ಏರಿಕೆ ಬಗ್ಗೆ ಮಾತನಾಡದೆ ಶಾಸಕ ಎಂ.ಪಿ. ರೇಣುಕಾಚಾರ್ಯರ ಬಗ್ಗೆ ಏಕವಚನದಲ್ಲಿ ಟೀಕಿಸುತ್ತಿದ್ದಾರೆ. ಇದನ್ನು ತಾಲೂಕಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಕಳೆದ ವರ್ಷ ಕೊರೊನಾದ ಮೊದಲನೇ ಅಲೆಯಲ್ಲಿ ರೇಣುಕಾಚಾರ್ಯ ಅವರು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ತೆರಳಿ ಮಾಸ್ಕ್, ಉಪಹಾರ, ಊಟ, ಔಷಧವಿತರಿಸಿ ಸಾಂತ್ವನ ಹೇಳಿದ್ದರು. ಈಗ ಎರಡನೇ ಅಲೆಯಲ್ಲೂ ಅವರ ಸೇವೆ ಅವಿಸ್ಮರಣೀಯವಾಗಿರುವುದನ್ನು ಕಾಂಗ್ರೆಸ್ ಮುಖಂಡರಿಗೆ ಸಹಿಸಲಾಗುತ್ತಿಲ್ಲ ಎಂದು ಕುಟುಕಿದರು.
ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್ ಮಾತನಾಡಿ, ಪ್ರತಿಭಟನೆ ಹೆಸರಿನಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗೆ ಮಾತನಾಡಲು ಬೇರೆ ವಿಷಯವೇ ಇಲ್ಲ. ಶಾಸಕರ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಇತರರು ಇದ್ದರು.