ಶ್ರೀನಗರ್ :ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಭ್ರಮ ಆಚರಿಸಿದ ಶ್ರೀನಗರದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅನ್ವಯ ಎರಡು ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ಮಂಗಳವಾರ(ಅಕ್ಟೋಬರ್ 26) ತಿಳಿಸಿದ್ದಾರೆ.
ಇದನ್ನೂ ಓದಿ:ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್
ಶ್ರೀನಗರ ಹಾಗೂ ಶ್ರೀ ಕಾಶ್ಮೀರ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಪಾಕ್ ಜಯಗಳಿಸಿದ್ದಕ್ಕೆ ಸಂಭ್ರಮಿಸಿದ್ದಲ್ಲದೇ, ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿತ್ತು.
ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಜಮ್ಮು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಸಾಜದ್ ಲೋನ್ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ನಡವಳಿಕೆ ಒಪ್ಪತಕ್ಕದ್ದಲ್ಲ. ಆದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಇದರಿಂದ ಯಾವುದೇ ಸಹಾಯವಾಗುವುದಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಜಮ್ಮು-ಕಾಶ್ಮೀರದ ಕರಣ್ ನಗರ್ ಮತ್ತು ಸೌರಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ಮೇಲೆ ಭಯೋತ್ಪಾದಕ ನಿಗ್ರಹ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲು ಸತ್ಯಶೋಧನ ಸಮಿತಿಯನ್ನು ರಚಿಸಲಾಗಿದ್ದು, 48 ಗಂಟೆಯೊಳಗೆ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.