ನವದೆಹಲಿ: ಭಾರತದ ನೂತನ ಐಟಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಕ್ಯಾತೆ ತೆಗೆದಿದ್ದ ಟ್ವಿಟರ್ ವೆಬ್ ಸೈಟ್ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಹೌದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ದೇಶ ಎಂದು ತನ್ನ ನಕ್ಷೆಯಲ್ಲಿ ನಮೂದಿಸುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಆಮ್ ಆದ್ಮಿ ಪಕ್ಷಕ್ಕೆ ಉದ್ಯಮಿ ಮಹೇಶ್ ಸಾವನಿ ಸೇರ್ಪಡೆ ಬೆಳವಣಿಗೆಯ ಸಂಕೇತ : ಮನೀಶ್ ಸಿಸೋಡಿಯಾ
ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರಂನ ಕೆರಿಯರ್ ಸೆಕ್ಷನ್ ನಲ್ಲಿ ಕಂಡು ಬರುವ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದಿಂದ ಬೇರ್ಪಡಿಸಿ ತೋರಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವರದಿ ವಿವರಿಸಿದೆ.
ಈ ತಪ್ಪು ಮಾಹಿತಿಯ ನಕ್ಷೆಯನ್ನು ಟ್ವಿಟರ್ ವೆಬ್ ಸೈಟ್ ಬಳಕೆದಾರರು ಫ್ಲ್ಯಾಗ್ ಮಾಡಿದ್ದು, ಇದರಿಂದಾಗಿ ಹಲವು ಮಂದಿ ಆಕ್ರೋಶದ
ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.
ಆದರೆ ಟ್ವಿಟರ್ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿರುವುದು ಇದೇ ಮೊದಲ ಬಾರಿಯೇನಲ್ಲ, ಕಳೆದ ವರ್ಷ ಜಮ್ಮು-ಕಾಶ್ಮೀರದ ಲೇಹ್ ಅನ್ನು ಚೀನಾದ ಭಾಗವೆಂದು ನಕ್ಷೆಯಲ್ಲಿ ತೋರಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್ ಸಿಇಒಗೆ ಪತ್ರ ಬರೆದು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವುದಾಗಿ ತಿಳಿಸಿ, ತಪ್ಪನ್ನು ಸರಿಪಡಿಸುವಂತೆ ಸೂಚಿಸಿತ್ತು.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಅಗೌರವಗೊಳಿಸುವ ಟ್ವಿಟರ್ ನ ಎಲ್ಲಾ ಪ್ರಯತ್ನಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಭಾರತ ಕಳೆದ ವರ್ಷ ಎಚ್ಚರಿಕೆಯ ಸಂದೇಶ ರವಾನಿಸಿತ್ತು.