ಶ್ರೀನಗರ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲೆಯ ಸೋಪೋರ್ ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಇಂದು ಶನಿವಾರ ಗುಂಡಿನ ಕಾಳಗ ಏರ್ಪಟ್ಟಿದೆ.
ಸೋಪೋರ್ ಪಟ್ಟಣದ ಹೊರವಲಯದಲ್ಲಿರುವ ರೇಬಾನ್ ಗ್ರಾಮದಲ್ಲಿ ಮನೆಯೊಂದರಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ರಾಷ್ಟ್ರೀಯ ರೈಫಲ್ಸ್ ಪಡೆ ಮತ್ತು ವಿಶೇಷ ಕಾರ್ಯಾಚರಣೆ ಸಮೂಹದ ಭದ್ರತಾ ಸಿಬಂದಿಗಳು ಜತೆಗೂಡಿ ಎನ್ ಕೌಂಟರ್ ಆರಂಭಿಸಿದವು.
ಭದ್ರತಾ ಪಡೆಗಳು ತಮ್ಮನ್ನು ಎಲ್ಲ ಕಡೆಗಳಿಂದಲೂ ಸುತ್ತುವರಿದಿರುವುದನ್ನು ಅರಿತ ಉಗ್ರರು ಗುಂಡಿನ ಕಾಳಗಕ್ಕೆ ಮುಂದಾದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬಂದಿಗಳು ಗುಂಡಿನ ಉತ್ತರ ನೀಡಲು ಆರಂಭಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕನಿಷ್ಠ ಇಬ್ಬರು ಉಗ್ರರು ಅಡಗಿಕೊಂಡಿರುವುದಾಗಿ ಶಂಕಿಸಲಾಗಿದ್ದು ಅವರನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಯಾವುದೇ ರೀತಿಯ ವಿದ್ಯುನ್ಮಾನ ಅಪಪ್ರಚಾರ, ವದಂತಿ ಹರಡುವಿಕೆಯನ್ನು ತಡೆಯಲು ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.