ನವದೆಹಲಿ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಡಿಡಿಸಿ(ಜಿಲ್ಲಾ ಅಭಿವೃದ್ಧಿ ಮಂಡಳಿ) ಮತ್ತು ಪಂಚಾಯತ್ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದಾಗಿ ವರದಿ ತಿಳಿಸಿದೆ. ವಿವಿಧ ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆಗೆ ಮುಕ್ತಾಯವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ಹೇಳಿದೆ.
ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದ್ದು, 2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.
ಡಿಡಿಸಿ(ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ) ಮೊದಲ ಹಂತದ ಚುನಾವಣೆಗಾಗಿ 2,146 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ರಾಜ್ಯ ಚುನಾವಣಾಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.
ಚುನಾವಣೆಯಿಂದ ಕೆಲವು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ವಿಶ್ವಾಸ ಜನರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಈ ಕಾರಣದಿಂದಾಗಿಯೇ ನಾನು ಬೆಳಗ್ಗೆಯೇ ಮತ ಚಲಾಯಿಸಿರುವುದಾಗಿ ಬಂಡಿಪೋರಾ ಜಿಲ್ಲೆಯ ಮತದಾರರೊಬ್ಬರು ಇಂಡಿಯಾ ಟುಡೆ ಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ 280 ಕ್ಷೇತ್ರಗಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮತದಾನ ನಡೆದಿದೆ. ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಒಟ್ಟು 296 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 207 ಮಂದಿ ಪುರುಷರು, 89 ಮಹಿಳೆಯರು ಸೇರಿದ್ದಾರೆ ಎಂದು ವರದಿ ವಿವರಿಸಿದೆ.