ಶ್ರೀನಗರ: ಕಾಶ್ಮೀರದ 2 ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರ ಭಾರೀ ಕಾರ್ಯಾಚರಣೆ ನಡೆಸಿರುವ ಸೇನಾ ಪಡೆಗಳು ಲಷ್ಕರ್ ಕಮಾಂಡರ್ ಸೇರಿದಂತೆ 8 ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಉಗ್ರರು ಅಡಗಿದ್ದ ಮನೆಯ ಮಾಲೀಕನೂ ಗುಂಡು ತಗುಲಿ ಸಾವನ್ನಪ್ಪಿದ್ದಾನೆ.
ಶೋಪಿಯಾನ್‌ನ ದ್ರಾಗದ್ ಮತ್ತು ಕಚ್‌ದೋರಾ ಹಳ್ಳಿಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಮತ್ತು ಲಷ್ಕರ್ ಇ ತೋಯ್ಬಾಗೆ ಸೇರಿದ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಹತ ಉಗ್ರರಲ್ಲಿ ಲಷ್ಕರ್ ಕಮಾಂಡರ್ ಮತ್ತು 2017 ರಲ್ಲಿ ಸೇನಾಧಿಕಾರಿ ಲೆಫ್ಟಿನೆಂಟ್ ಉಮ್ಮರ್ ಫಯಾಜ್ ಹತ್ಯೆಗೈದಿದ್ದ ರಯೀಸ್ ಥೋಕೆರ್ ಇಷಾ#ಕ್ ಮಲೀಕ್ ಸೇರಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಿಪಡಿಸಿರುವ ಬಗ್ಗೆಯೂ ವರದಿಯಾಗಿದ್ದು, ಕೆಲವರು ಸೈನಿಕರತ್ತ ಕಲ್ಲು ತೂರಾಟ ನಡೆಸಿ ದೇಶ ದ್ರೋಹಿ ಕೃತ್ಯ ಮೆರಿದ್ದಾರೆ.
ಕಾರ್ಯಾಚರಣೆಯಲ್ಲಿ 44 ನೇ ರಾಷ್ಟ್ರೀಯ ರೈಫಲ್ಸ್, 3 ನೇ ರಾಷ್ಟ್ರೀಯ ರೈಫಲ್ಸ್, 34 ನೇ ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ನ ಯೋಧರು ಪಾಲ್ಗೊಂಡಿದ್ದರು.