Advertisement

ದೀಪಾವಳಿಗೆ ರಿಲಯನ್ಸ್‌ 5ಜಿ ಗಿಫ್ಟ್; 2 ತಿಂಗಳಲ್ಲಿ ನಾಲ್ಕು ನಗರಕ್ಕೆ ಕಾಲಿಡಲಿದೆ 5ಜಿ

09:31 PM Aug 29, 2022 | Team Udayavani |

ಮುಂಬೈ: ಬಹುನಿರೀಕ್ಷಿತ 5ಜಿ ನೆಟ್‌ವರ್ಕ್‌ ಇನ್ನೆರೆಡು ತಿಂಗಳಲ್ಲಿ ಸಿಗಲಿದೆ. ದೀಪಾವಳಿ ವೇಳೆಗೆ ಜಿಯೋ 5ಜಿ ಸೌಲಭ್ಯವನ್ನು ಜಾರಿಗೆ ತರುವುದಾಗಿ ರಿಲಯನ್ಸ್‌ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಸೋಮವಾರ ಘೋಷಿಸಿದ್ದಾರೆ.

Advertisement

ರಿಲಯನ್ಸ್‌ನ 45ನೇ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಮೊದಲಿಗೆ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಜಿಯೋ 5ಜಿ ಜಾರಿಗೆ ಬರಲಿದೆ. 2023ರ ವೇಳೆಗೆ ದೇಶದ ಮೂಲೆ ಮೂಲೆಯಲ್ಲೂ 5ಜಿ ಲಭ್ಯವಿರಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಈ ಸೇವೆಗಾಗಿ ರಿಲಯನ್ಸ್‌ 2.75 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿದೆ.

“ನಮ್ಮ 5ಜಿ ಸೇವೆಯು 4ಜಿ ಮೇಲೆ ಅವಲಂಬಿತವಾಗಿರದ ಅತ್ಯಾಧುನಿಕ ಸ್ಟಾಂಡ್‌ ಅಲೋನ್‌ 5ಜಿ ತಂತ್ರಜ್ಞಾನದಲ್ಲಿರುತ್ತದೆ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಅತ್ಯಾಧುನಿಕ 5ಜಿ ನೆಟ್‌ವರ್ಕ್‌ ಆಗಿರಲಿದೆ. 2000 ಇಂಜಿನಿಯರ್‌ಗಳು ಈ ನೆಟ್‌ವರ್ಕ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಗೂಗಲ್‌ನೊಂದಿಗೆ ಸೇರಿಕೊಂಡು ಜಿಯೋ 5ಜಿ ಫೋನನ್ನೂ ತರಲು ಯತ್ನಿಸಲಾಗುತ್ತಿದೆ’ ಎಂದಿದ್ದಾರೆ ಮುಕೇಶ್‌ ಅಂಬಾನಿ.

ಮಕ್ಕಳಿಗೆ ಜವಾಬ್ದಾರಿ ಹಂಚಿಕೆ:
ಇದೇ ಸಭೆಯಲ್ಲಿ ಮುಕೇಶ್‌ ತಮ್ಮ ಪುತ್ರಿ ಇಶಾ ಅವರನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿರುವ ರಿಲಯನ್ಸ್‌ ರಿಟೇಲ್‌ಗೆ ಮುಖ್ಯಸ್ಥೆಯನ್ನಾಗಿ ಘೋಷಿಸಿದ್ದಾರೆ. ಹಾಗೆಯೇ ಪುತ್ರ ಅನಂತ್‌ರನ್ನು ಎನರ್ಜಿ ಬ್ಯುಸಿನೆಸ್‌ನ ಹೊಸ ನಾಯಕ ಎಂದು ಕರೆದಿದ್ದಾರೆ.

ಮುಕೇಶ್‌ ಪ್ರಮುಖ ಘೋಷಣೆಗಳು:
– ಪೆಟ್ರೋಕೆಮಿಕಲ್‌ ಸಾಮರ್ಥ್ಯ ವಿಸ್ತರಣೆಗೆ 5 ವರ್ಷಗಳಲ್ಲಿ 75,000 ಕೋಟಿ ರೂ. ಹೂಡಿಕೆ.
– ಜಿಯೋ ಮಾರ್ಟ್‌ ಸಹಭಾಗಿತ್ವದಲ್ಲಿ ವಾಟ್ಸ್‌ಆ್ಯಪ್‌ನಿಂದ ಇನ್‌-ಆ್ಯಪ್‌ ಶಾಪಿಂಗ್‌ ಸೌಲಭ್ಯ. ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಜಿಯೋಮಾರ್ಟ್‌ನಿಂದ ಉತ್ಪನ್ನಗಳನ್ನು ಖರೀದಿಸಿ, ವಾಟ್ಸ್‌ಆ್ಯಪ್‌ ಪೇ ಮೂಲಕ ಹಣ ಪಾವತಿಗೆ ಅವಕಾಶ.
– ಸೌರಫ‌ಲಕ, ಎಲೆಕ್ಟ್ರೋಲೈಸರ್‌ಗಳು, ಇಂಧನ ಕೋಶ ಮತ್ತಿತರ ಪವರ್‌ ಎಲೆಕ್ಟ್ರಾನಿಕ್ಸ್‌ಗಳಿಗೆ ಸಂಬಂಧಿಸಿದ 5ನೇ ಗಿಗಾ ಫ್ಯಾಕ್ಟರಿ ಸ್ಥಾಪನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next