ಹೊಸದಿಲ್ಲಿ : ರಿಲಯನ್ಸ್ ಜಿಯೋ ಇಂದಿನಿಂದ ಆರಂಭಗೊಂಡು ಮಾರ್ಚ್ 31ರ ವರೆಗೆ ತನ್ನ ಗ್ರಾಹಕರನ್ನು ಜಿಯೋ ಪ್ರೈಮ್ ಮೆಂಬರ್‌ಶಿಪ್ ಪ್ಲಾನ್ ನಡಿ ಭರ್ತಿ ಮಾಡಿಕೊಳ್ಳುವ ಅಭಿಯಾನವನ್ನು ಆರಂಭಿಸಿದೆ. ಇದನ್ನು ಗ್ರಾಹಕರು 99 ರೂ.ಗಳಿಗೆ ಪಡೆಯಬಹುದಾಗಿದೆ.
ಜಿಯೋ ಪ್ರೈಮ್ ಮೆಂಬರ್‌ಶಿಪ್ ಪ್ಲಾನ್ “ಹ್ಯಾಪಿ ನ್ಯೂ ಇಯರ್ ಆಫರ್’ನ ವಿಸ್ತರಣೆಯೇ ಆಗಿದೆ. ಆದುದರಿಂದ ಎಲ್ಲ ಹೊಸ ಹಾಗೂ ಹಳೆಯ ಜಿಯೋ ಗ್ರಾಹಕರು ಮಾರ್ಚ್ 31ರೊಳಗೆ ಪ್ರೈಮ್ ಜಿಯೋ ಗ್ರಾಹಕರಾಗುವ ಮೂಲಕ ಪ್ರೈಮ್ ಜಿಯೋ ಪ್ಲಾನ್ ಸೌಕರ್ಯಗಳನ್ನು ಆನಂದಿಸಬಹುದಾಗಿದೆ.
ರಿಲಯನ್ಸ್ ಜಿಯೋ ಕಂಪೆನಿಯು ತನ್ನ ಗ್ರಾಹಕರಿಗೆ ಬೂಸ್ಟರ್ ಪ್ಯಾಕೇಜ್ ಕೂಡ ನೀಡುತ್ತಿದೆ. ತಿಂಗಳ ನಡುವಿನಲ್ಲಿ ಡೇಟಾ ಮುಗಿದು ಹೋಗಿದಲ್ಲಿ ಬೂಸ್ಟರ್ ಪ್ಯಾಕೇಜ್‌ನಿಂದ ಅನುಕೂಲವಾಗಲಿದೆ. ಇದು 11ರೂ.ಗಳಿಂದ ಆರಂಭವಾಗಿ 301 ರೂ.ಗಳ ವರೆಗಿನ ದರವನ್ನು ಹೊಂದಿರುತ್ತದೆ. ಇದರಿಂದಾಗಿ ಗ್ರಾಹಕರು ಅಬಾಧಿತ ಹೈ ಸ್ಪೀಡ್ ಇಂಟರ್‌ನೆಟ್ ಸೌಕರ್ಯವನ್ನು ಆನಂದಿಸಬಹುದಾಗಿದೆ.
ಇದೇ ವೇಳೆ ಜಿಯೋ ಕಂಪೆನಿಯು ತನ್ನ ಎಲ್ಲ ಬಳಕೆದಾರರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಗಳು ಸಿಗುವಂತೆ ಮಾಡಲು ನಿರ್ಧರಿಸಿದ್ದು ಆ ಪ್ರಕಾರ ದಿನಕ್ಕೆ 1 ಜಿಬಿ ಡೇಟಾ ಮಿತಿಯೊಂದಿಗೆ FUP (ಫೇರ್ ಯೂಸೇಜ್ ಪಾಲಿಸಿ) ಯನ್ನು ಮುಂದುವರಿಸಲಿದೆ. ಆದರೆ ಇದು 999 ರೂ. ನಿಂದ 9,999 ರೂ. ವರೆಗಿನ ಪ್ಲಾನ್‌ಗಳಿಗೆ ಅನ್ವಯವಾಗುವುದಿಲ್ಲ.
ಜಿಯೋ ಪ್ರೈಮ್ ಪ್ಲಾನ್ 149 ರೂ.ಗಳೊಂದಿಗೆ ಆರಂಭವಾಗುತ್ತದೆ. ಇದು 4ಜಿ ಸ್ಪೀಡ್‌ನೊಂದಿಗೆ ಅನ್‌ಲಿಮಿಟೆಡ್ voice ಕಾಲ್ ಮತ್ತು ಉಚಿತ ಮೆಸೇಜ್‌ಗಳೊಂದಿಗೆ 28 ದಿನಗಳ ಅವಧಿಗೆ 2 ಜಿಬಿ ಡೇಟಾ ಒಳಗೊಂಡಿರುತ್ತದೆ.
ರಿಲಯನ್ಸ್ ಜಿಯೋ ಪ್ಲಾನ್‌ಗಳು ಜಿಯೋ ಆ್ಯಪ್ ಗಳ ಗೊಂಚಲನ್ನು ಹೊಂದಿರುತ್ತವೆ. ಇವುಗಳಲ್ಲಿ ಮೈಜಿಯೋ, ಜಿಯೋ ಚ್ಯಾಟ್, ಜಿಯೊ ಮನಿ, ಜಿಯೋ ಮ್ಯೂಸಿಕ್ ಸೇರಿರುತ್ತವೆ. ಜಿಯೋ ನೆಟ್‌ವರ್ಕ್ ಮೂಲಕ ಈ ಆ್ಯಪ್‌ಗಳ ಹೂರಣವನ್ನು ಬಳಕೆದಾರರು ಪಡೆಯಬಹುದಾಗಿರುತ್ತದೆ.