ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ತಂಡ ಫೈನಲ್ ಪ್ರವೇಶಿಸಿದೆ. ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಕೇನ್ ವಿಲಿಯಮ್ಸನ್ ಪಡೆ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶ ಪಡೆದಿದೆ.
ಕಿವೀಸ್ ಆಲ್ ರೌಂಡರ್ ಜಿಮ್ಮಿ ನೀಶಮ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 29 ಎಸೆತಗಳಲ್ಲಿ ಗೆಲುವಿಗೆ 60 ರನ್ ಬೇಕಾಗಿದ್ದಾಗ ಕ್ರೀಸ್ ಗೆ ಬಂದ ನೀಶಮ್ ಕೇವಲ 11 ಎಸೆತಗಳಲ್ಲಿ 27 ರನ್ ಚಚ್ಚಿದರು. ಇದರಿಂದ ಸುಲಭವಾಗಿ ಗೆಲುವು ದಾಖಲಿಸಲು ಸಾಧ್ಯವಾಯಿತು.
ಆದರೆ ತಂಡ ಗೆಲುವು ಸಾಧಿಸುತ್ತಿದ್ದಂತೆ ಡಗೌಟ್ ನಲ್ಲಿ ಕುಳಿತಿದ್ದ ನೀಶಮ್ ಮೌನವಾಗಿದ್ದರು. ಆಟಗಾರರು ಸಂಭ್ರಮಾಚರಣೆ ನಡೆಸುತ್ತಿದ್ದರೂ ನೀಶಮ್ ಮಾತ್ರ ಸುಮ್ಮನೆ ಕುಳಿತಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ:ಫಸ್ಟ್ ನೈಟ್-ರೊಮ್ಯಾನ್ಸ್ ಬಗ್ಗೆ ಹೇಳಿ, ನೆಟ್ಟಿಗರಿಂದ ಟ್ರೋಲ್ ಆದ ರಚಿತಾ ರಾಮ್
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನೀಶಮ್, “ಕೆಲಸ ಮುಗಿದಿದೆಯೇ? ಹಾಗೆಂದು ನನಗನಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
2019ರ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಅತ್ಯಂತ ಕೊನೆಯ ಕ್ಷಣದಲ್ಲಿ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.