ಔರಂಗಾಬಾದ್: ಮುಂಬಯಿ ತಂಡದ ಪ್ರತಿಭಾನ್ವಿತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅಂಡರ್-19 ಅಂತಾರಾಜ್ಯ ಮಟ್ಟದ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೋಘ ದ್ವಿಶತಕವೊಂದನ್ನು ಬಾರಿಸಿ ಸುದ್ದಿಯಾಗಿದ್ದಾರೆ. ರವಿವಾರ ಅವರು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅಜೇಯ 202 ರನ್ ರಾಶಿ ಹಾಕಿದರು.
ಗುಜರಾತ್ ವಿರುದ್ಧ ನಡೆದ ಈ ಕೂಟದ ಮೊದಲ ಪಂದ್ಯದಲ್ಲಿ ಜೆಮಿಮಾ 178 ರನ್ ಬಾರಿಸಿದ್ದರು. ಇದರೊಂದಿಗೆ ಈ ಪಂದ್ಯಾ ವಳಿಯ 3 ಇನ್ನಿಂಗ್ಸ್‌ಗಳಲ್ಲಿ 397 ರನ್ ಮಾಡಿದ ಸಾಧನೆ ಜೆಮಿಮಾ ಅವರದಾಗಿದೆ.
ರವಿವಾರ ಸೌರಾಷ್ಟ್ರ ವಿರುದ್ಧ “ಔರಾಂಗಾಬಾದ್ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ’ ನಲ್ಲಿ ಮುಂಬಯಿ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆಯಿತು. ದ್ವಿತೀಯ ವಿಕೆಟಿಗೆ ಜತೆಗೂಡಿದ ಜೆಮಿಮಾ ರೋಡ್ರಿಗಸ್ ಮತ್ತು ಎಸ್.ಕೆ. ರಾವತ್ ತ್ರಿಶತಕದ ಜತೆಯಾಟ ದಾಖಲಿಸಿ ಮೆರೆದರು.
ಜೆಮಿಮಾ ಅವರ ಶತಕ 83 ಎಸೆತಗಳಲ್ಲಿ ಪೂರ್ತಿಗೊಂಡರೆ, 161 ಎಸೆತಗಳಲ್ಲಿ ದ್ವಿಶತಕ ಒಲಿಯಿತು. ಒಟ್ಟು 163 ಎಸೆತ ಎದುರಿಸಿದ ಜೆಮಿಮಾ 21 ಬೌಂಡರಿ ನೆರವಿನಿಂದ ಅಜೇಯ 202 ರನ್ ಬಾರಿಸಿದರು. ಇವರ ಬ್ಯಾಟಿಂಗ್ ಸಾಹಸದಿಂದ ಮುಂಬಯಿ ಕೇವಲ 2 ವಿಕೆಟಿಗೆ 347 ರನ್ ಪೇರಿಸಿತು.
ಜೆಮಿಮಾ ರೋಡ್ರಿಗಸ್ ವನಿತಾ ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿಶತಕ ಬಾರಿಸಿದ ಕೇವಲ ಎರಡನೇ ಆಟಗಾರ್ತಿ. ಭಾರತ ತಂಡದ ಈಗಿನ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮೊದಲಿಗರು. ಅವರು 2013ರ ಗುಜರಾತ್ ವಿರುದ್ಧದ ವಡೋದರಾ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆಡುತ್ತ ಅಜೇಯ 224 ರನ್ ಸಿಡಿಸಿದ್ದರು. ಅಂಡರ್-19 ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಯನ್ನು ಬಿಸಿಸಿಐ 2007-08ರಿಂದ ಆಯೋಜಿಸಲಾರಂಭಿಸಿತ್ತು.
ಹಾಕಿಪಟುವೂ ಹೌದು!
17ರ ಹರೆಯದ ಜೆಮಿಮಾ ಉತ್ತಮ ಹಾಕಿ ಆಟಗಾರ್ತಿಯೂ ಹೌದು. ಇವರ ಕ್ರೀಡಾ ಬದುಕು ಆರಂಭಗೊಂಡದ್ದೇ ಹಾಕಿ ಮೂಲಕ. 13ರ ಹರೆಯದಿಂದಲೇ ಜೆಮಿಮಾ ಹಾಕಿಯಲ್ಲಿ ತೊಡಗಿಸಿ ಕೊಂಡಿ ದ್ದರು. ಮುಂಬಯಿ ಮತ್ತು ಮಹಾರಾಷ್ಟ್ರ ಅಂಡರ್-19 ಹಾಕಿ ತಂಡ ಗಳನ್ನು ಪ್ರತಿನಿಧಿಸಿದ ಜೆಮಿಮಾ, ಅತ್ಯುತ್ತಮ ಸಾಧನೆಯ ಮೂಲಕ ಮುಂಬಯಿ ಸೀನಿಯರ್ ತಂಡಕ್ಕೂ ಆಯ್ಕೆಯಾಗಿದ್ದರು.