ರಾಂಚಿ: ಜಾರ್ಖಂಡ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಬಳಿಕ ಎನ್‌ಡಿಎ ಹಾಗೂ ಇಂಡಿಯಾ ಕೂಟ ಬಣದಲ್ಲಿ ಕ್ಷೇತ್ರಗಳ ಹಂಚಿಕೆ ಅಂತಿಮಗೊಳಿಸುವಲ್ಲಿ ನಿರತರಾಗಿದ್ದು, ಕಾಂಗ್ರೆಸ್ ಮತ್ತು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 81 ವಿಧಾನಸಭಾ ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಲು ಒಮ್ಮತಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ರಾಜ್ಯದಲ್ಲಿ ಉಳಿದ 11 ಕ್ಷೇತ್ರಗಳಿಗೆ ಇಂಡಿಯಾ ಕೂಟದ ಪಾಲುದಾರರಾದ ಆರ್‌ಜೆಡಿ ಮತ್ತು ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಮಂತ್ ಸೋರೆನ್ ಮತ್ತು ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ ಹೇಮಂತ್ ಸೊರೆನ್ ರಾಷ್ಟ್ರೀಯ ಜನತಾ ದಳ ಮತ್ತು ಎಡರಂಗಕ್ಕೆ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಉಲ್ಲೇಖಿಸಿಲ್ಲ.
ಮೊದಲ ಸುತ್ತಿನ ಮಾತುಕತೆಯಂತೆ, ಜಾರ್ಖಂಡ್ ರಾಜ್ಯದಲ್ಲಿ 70 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ. ಇತರ ಇಂಡಿಯಾ ಮೈತ್ರಿ ಪಾಲುದಾರರು ಉಳಿದ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿವರಗಳ ನಂತರ ನೀಡಲಾಗುವುದುʼ ಎಂದರು.
ಕ್ಷೇತ್ರಗಳ ಸೀಟು ಹಂಚಿಕೆ ಮಾತುಕತೆ ಪ್ರಕ್ರಿಯೆ ಸುಗಮವಾಗಿ ನಡೆದಿದೆ ಎಂದು ಜಾರ್ಖಂಡ್ ಸಚಿವ ಮತ್ತು ಕಾಂಗ್ರೆಸ್ ನಾಯಕ ಬನ್ನಾ ಗುಪ್ತಾ ಸ್ಪಷ್ಟಪಡಿಸಿದ್ದಾರೆ. “ನಮ್ಮ ಉಸ್ತುವಾರಿ, ಅಧ್ಯಕ್ಷರು ಮತ್ತು ಸಿಎಲ್‌ಪಿ ನಾಯಕರು ಇಂಡಿಯಾ ಬ್ಲಾಕ್ ತಂಡದವರೊಂದಿಗಿನ ಮಾತುಕತೆಯು ವ್ಯವಸ್ಥಿತ ಮತ್ತು ಸುಗಮವಾಗಿ ನಡೆದಿದೆ. ಯಾವುದೇ ಅನುಮಾನ ಅಥವಾ ಅನಿಶ್ಚಿತತೆಗಳಿಲ್ಲ. ಜಾರ್ಖಂಡ್‌ನ ಜನರು ಮತ್ತೊಮ್ಮೆ ಹೇಮಂತ್ ಸೊರೇನ್ ನೇತೃತ್ವದ ಇಂಡಿಯಾ ಕೂಟಕ್ಕೆ ಆಡಳಿತ ನಡೆಸುವ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
2019ರಲ್ಲಿ ಕಾಂಗ್ರೆಸ್‌ನ ಮಂಜು ಕುಮಾರಿಯ ಸೋಲಿಸಿ 18,175 ಮತಗಳ ಅಂತರದಿಂದ ಗೆದ್ದಿದ್ದ ಜಮುವಾದ ಹಾಲಿ ಶಾಸಕ ಹಜ್ರಾ ಮತ್ತು ರಜಾಕ್ ಸಮಾರಂಭವೊಂದರಲ್ಲಿ ಜೆಎಂಎಂಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಜೆಎಂಎಂಗೆ ಸ್ವಾಗತಿಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇಬ್ಬರೂ ಹಳೆಯ ಯೋಧರು ಪಕ್ಷ ಬಲಪಡಿಸುತ್ತಾರೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನ. 23ರಂದು ಮತಗಳ ಎಣಿಕೆ ನಡೆಯಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 43 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ 31 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಕಾಂಗ್ರೆಸ್ 27 ರಿಂದ 28 ಸ್ಥಾನಗಳ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 2019ರ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನಗಳ ಫಲಿತಾಂಶದಲ್ಲಿ ಜೆಎಂಎಂ 30, ಕಾಂಗ್ರೆಸ್ 16 ಮತ್ತು ಆರ್‌ಜೆಡಿ ಒಂದು ಸ್ಥಾನ ಗೆದ್ದಿತ್ತು. ಮೂರು ಪಕ್ಷಗಳು ಬಹುಮತದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದವು.