ಬೆಂಗಳೂರು: ನಕಲಿ ಚಿನ್ನಾಭರಣ ಕೊಟ್ಟು ಅಸಲಿ ಎಂದು ನಂಬಿಸಿದ ಅಜ್ಜಿಗ್ಯಾಂಗ್ ಜ್ಯುವೆಲ್ಲರಿ ಅಂಗಡಿ ಮಾಲೀಕನಿಗೆ ವಂಚಿಸಿರುವ ಘಟನೆ ನಡೆದಿದೆ.
ಈ ಸಂಬಂಧ ಜ್ಯುವೆಲ್ಲರಿ ಅಂಗಡಿ ಮಾಲೀಕ ಓಂಪ್ರಕಾಶ್ ಅಮೃತಹಳ್ಳಿ ಠಾಣೆಯಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜ.20 ರ ಮಧ್ಯಾಹ್ನ ಮಧ್ಯಾಹ್ನ 12 ಗಂಟೆಗೆ ಸಮಯದಲ್ಲಿ ಓಂಪ್ರಕಾಶ್‌ರ ಧನಲಕ್ಷ್ಮೀ ಜ್ಯುವೆಲ್ಲರ್ ಮಳಿಗೆಗೆ ಅಜ್ಜಿಯೊಂದಿಗೆ ಇಬ್ಬರು ಆರೋಪಿಗಳು ಬಂದಿದ್ದಾರೆ. ಈ ಪೈಕಿ ಒಬ್ಬ ರಾಹುಲ್ ಎಂದು ಪರಿಚಯಿಸಿಕೊಂಡು ನನ್ನ ಮಗಳ ಮದುವೆ ಇದೆ, ಹೀಗಾಗಿ ನನ್ನ ಬಳಿ ನಮ್ಮ ತಾಯಿಯ ಹಳೆಯ ಆಭರಣಗಳಿದ್ದು, ಅವುಗಳನ್ನು ಹಾಕಿ ಹೊಸದಾಗಿ ಆಭರಣಗಳನ್ನು ಕೊಳ್ಳಲು ಬಂದಿರುವುದಾಗಿ ಹೇಳಿ ಗುಂಡಿನ ಸರವನ್ನು ತೋರಿಸಿದ್ದು, ಅದರಲ್ಲಿದ್ದ ಒಂದು ಗುಂಡನ್ನು ಕಟ್ ಮಾಡಿಕೊಂಡ ಅಂಗಡಿ ಮಾಲೀಕ ಪರೀಕ್ಷೆ ಮಾಡಿಸಿ ನಂತರ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿದ್ದರು.
ಜ.25ರಂದು ಸುಮಾರು 240 ಗ್ರಾಂ ತೂಕದ ಚಿನ್ನದಂತೆ ಕಾಣುವ ಗುಂಡಿನ ಸರವನ್ನು ತೋರಿಸಿದ್ದು, ಮೊದಲು ತಂದು ಪರೀಕ್ಷೆಗೆ ಕೊಟ್ಟಿದ್ದ ಗುಂಡಿನ ಸರ ಇದೆ ಎಂದು ತಿಳಿದ ಮಾಲೀಕ ಅದನ್ನು 10.5 ಲಕ್ಷ ರೂ.ಗಳಿಗೆ ತೆಗೆದುಕೊಂಡು ಅದರ ಬೆಲೆಗೆ 168 ಗ್ರಾಂ ವಿವಿಧ ಚಿನ್ನದ ಆಭರಣ ಮತ್ತು 250 ಗ್ರಾಂ ಬೆಳ್ಳಿಯ ಆಭರಣಗಳನ್ನು ನೀಡಿದ್ದಾರೆ. ಬಳಿಕ ತಾವು ಮಾರಾಟಕ್ಕೆ ತೆಗೆದುಕೊಂಡಿದ್ದ ಗುಂಡಿನ ಸರವನ್ನು ಚಿಕ್ಕಪೇಟೆ ವಿಲೇವಾರಿ ಅಂಗಡಿಗೆ ತೆಗೆದುಕೊಂಡು ಹೋದಾಗ ಅದು ನಕಲಿ ಎಂಬುದು ಗೊತ್ತಾಗಿದೆ ಎಂದು ಓಂಪ್ರಕಾಶ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.