ಪಟ್ಟಣದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಶೀಲ್ದಾರ್ ನಾಗೀಂದ್ರಪ್ಪ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ಅಧ್ಯಕ್ಷ ರೇವಣಸಿದ್ಧಪ್ಪಗೌಡ ಕಮಾನಮನಿ, ಸೇಡಂ ತಾಲೂಕಿನ ಮುಗನೂರ ಗ್ರಾಮದಲ್ಲಿ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಆರು ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೂರು ಜನರ ಹತ್ಯೆ ಮಾಡಲಾಗಿದೆ. ಈ ವಿಷಯದಲ್ಲಿ ಮುಂಜಾಗೃತವಾಗಿ ರಕ್ಷಣೆ ನೀಡುವಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಅದೇ ರೀತಿ ತಾಲೂಕಿನ ಕಲ್ಲೂರ.ಕೆ, ಕೋಣಶಿರಸಗಿ, ಮಾವನೂರ ಗ್ರಾಮಗಳಲ್ಲಿ ಕೋಲಿ ಸಮಾಜದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ ರೌಡಿ ಶೀಟರ್ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆಯೊಬ್ಬಳು ಪೊಲೀಸರ ಲಾಠಿ ಏಟಿಗೆ ಬಲಿಯಾಗಿದ್ದಾಳೆ. ಪಟ್ಟಣದ ವೆಲ್ಡಿಂಗ್ ಶಾಪ್‌ನಲ್ಲಿ ಸಮಾಜದ ಯುವಕನನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ತಂದು
ವಿದ್ಯುತ್ ತಗುಲುವಂತೆ ಮಾಡಿ ಸಾವಿಗೆ ಕಾರಣರಾದವರನ್ನು ಇಲ್ಲಿಯವರೆಗೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಕುರಿತು ಗಮನಹರಿಸಿ ಮುಗನೂರ ಕುಟುಂಬಕ್ಕೆ ಕೋಟಿ ರೂ. ಪರಿಹಾರದ ಜೊತೆಗೆ ಸದಸ್ಯರೊಬ್ಬರಿಗೆ
ಸರಕಾರಿ ಉದ್ಯೋಗ ನೀಡಬೇಕು. ವಿದ್ಯುತ್ ಶಾಕ್‌ನಿಂದ ಮೃತಪಟ್ಟ ವ್ಯಕ್ತಿಗೆ 25 ಲಕ್ಷ ರೂ. ಪರಿಹಾರ ಹಾಗೂ ಸಾಲಬಾಧೆಯಿಂದ
ಆತ್ಮಹತ್ಯೆ ಮಾಡಿಕೊಂಡ ಸಮಾಜದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಜಗದೀಶ ತಳವಾರ, ಶಿವಲಿಂಗಪ್ಪ ಕಿನ್ನೂರ, ದೇವಿಂದ್ರ ಚಿಗರಳ್ಳಿ, ರಾಚಣ್ಣ ಯಡ್ರಾಮಿ, ನಾಗೇಂದ್ರಪ್ಪ ಸಿಪಾಯಿ, ಉಮಾಕಾಂತ ಮಾವನೂರ, ಗಂಗಣ್ಣ ಗುಡೂರ, ಸಾಹೇಬಗೌಡ ಬಿರಾದಾರ, ಮಲ್ಲಿಕಾರ್ಜುನ ತಳವಾರ, ರಾಜೇಂದ್ರ ರಾಜವಾಳ, ಚಂದ್ರಕಾಂತ ಗಂವ್ಹಾರ, ನರಸಪ್ಪ ಕಣಮೇಶ್ವರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
Advertisement