ಜೇವರ್ಗಿ: ಸಾಮಾನ್ಯವಾಗಿ ಮನೆ ತಾರಸಿ ಮೇಲೆ ಹೂವಿನ ಕುಂಡ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ನಾವೆಲ್ಲ ನೋಡಿದ್ದೇವೆ. ಆದರೆ ಪಟ್ಟಣದ ದತ್ತನಗರ ನಿವಾಸಿಯೊಬ್ಬ ತನ್ನ ಮನೆಯ ಮೇಲ್ಛಾವಣಿ ಮೇಲೆ ಕುರಿ ಸಾಕಾಣಿಕೆ ಜೊತೆಗೆ ತರಹೇವಾರಿ ತರಕಾರಿ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Advertisement
ವಿಜಯಪುರ ರಸ್ತೆಯಲ್ಲಿ ಬರುವ ಪಟ್ಟಣದ ದತ್ತನಗರದ ನಿವಾಸಿಯಾಗಿರುವ ಶಂಕರಯ್ಯ ಹೂಗಾರ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದವರು.
Related Articles
Advertisement
ಶಂಕರಯ್ಯನವರು ತಮ್ಮ ಮನೆ ತಾರಸಿ ಮೇಲೆ ವಾಟರ್ ಫ್ರೂಫ್ ಪ್ಲಾಸ್ಟಿಕ್ ಬಳಸಿ ಅದರಲ್ಲಿ ಎರೆಮಣ್ಣು ಹಾಕಿದ್ದಾರೆ. ಸಿಂಟೆಕ್ಸ್ ಮೂಲಕ ನೀರು ಹರಿಬಿಟ್ಟು ಅದರಲ್ಲಿ ಬೆಂಡೆಕಾಯಿ, ಮೆಂತೆ, ಪಾಲಕ್, ಕೊತಂಬರಿ, ಪುಂಡಿ ಪಲ್ಯಾ, ಚವಳಿ ಕಾಯಿ, ಕುಂಬಳಕಾಯಿ ಹಾಗೂ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ. ಖಾಲಿ ನಿವೇಶನದಲ್ಲಿ ಕಬ್ಬು, ಬಾಳೆಗಿಡ, ಕುರಿಗಳಿಗಾಗಿ ಮೇವು, ಸಾಗವಾನಿ, ಹೆಬ್ಬೇವಿನ ಗಿಡಗಳನ್ನು ನೆಟ್ಟಿದ್ದಾರೆ. ಅದರ ಜೊತೆಗೆ ಐದಾರು ಕುರಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿ ಸಾಕಾಣಿಕೆ ಇರುವ ಕಾರಣ ತಾರಸಿ ತೋಟಕ್ಕೆ ಬೇಕಾದಷ್ಟು ಗೊಬ್ಬರ ಲಭ್ಯವಾಗುತ್ತಿದೆ.
ನಮಗೆ ಇರಲು ಜಾಗವಿಲ್ಲ, ಇವೆಲ್ಲಾ ಕೈತೋಟ ಎಲ್ಲಿ ಮಾಡೋಣ ಎನ್ನುವುದು ಕೆಲವರ ಪ್ರಶ್ನೆಯಾಗಿರುತ್ತದೆ. ಆದರೆ ಇದಕ್ಕೆ ಶಂಕರಯ್ಯನವರ ತಾರಸಿ ತೋಟ ತಾಜಾ ಉದಾಹರಣೆ. ದೊಡ್ಡ ನಗರಗಳಲ್ಲಿ ಒಂದಡಿ ಜಾಗ ಬಿಡದೇ ಮನೆ ಕಟ್ಟುವ ಪರಿಸ್ಥಿತಿ ಇರುವುದರಿಂದ ಕೈತೋಟ ಮಾಳಿಗೆ ಏರಿ ಕುಳಿತುಕೊಳ್ಳುವಂತಾಗಿದೆ. ಶಂಕರಯ್ಯನವರಿಗೆ ತಾರಸಿ ತೋಟ ಖುಷಿ, ನೆಮ್ಮದಿ ನೀಡುವುದರ ಜೊತೆಗೆ ವಿಷ ರಹಿತವಾದ ತರಕಾರಿ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನಿಂದ ಬಣಗುಡುವ ತಾರಸಿಗೆ ಹಸಿರು ಗಿಡಗಳು, ಪೊದೆಗಳು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ತಾರಸಿಯ ಕೆಳಗಿನ ಕೋಣೆಗಳು ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ. ಈ ತೋಟದಿಂದ ವಾರದ ತರಕಾರಿ ಖರ್ಚು ಉಳಿತಾಯ ಹಾಗೂ ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ನೀಡುತ್ತೇವೆ ಎಂದು ಶಂಕರಯ್ಯನ ಪತ್ನಿ ಗುಂಡಮ್ಮ ತಿಳಿಸುತ್ತಾರೆ.