ಜೈಪುರ : “ಪ್ರಧಾನಿಯವರೇ, ಜೆಟ್ ಏರ್ ವೇಸ್ ವಿಮಾನದಲ್ಲಿ ನಾನು ಕಳೆದ ಮೂರು ತಾಸುಗಳಿಂದ ಇದ್ದೇನೆ; ಇದು ಹೈಜಾಕ್ ಆಗಿರುವ ಹಾಗೆ ಕಾಣುತ್ತಿದೆ’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಪ್ರಯಾಣಿಕ ನಿತಿನ್ ವರ್ಮಾ ಎಂಬವರು ಮಾಡಿದ ಟ್ವೀಟ್, ಅವರಿಗೇ ತಿರುಗುಬಾಣವಾಗಿ ಬಂಧನಕ್ಕೆ ಸಂಕಷ್ಟಕ್ಕೆ ಗುರಿಯಾಗಬೇಕಾದ ದುಃಸ್ಥಿತಿ ಒದಗಿದ ವಿಲಕ್ಷಣಕಾರಿ ಪ್ರಸಂಗ ನಡೆದಿದೆ.
ಈ ಪ್ರಸಂಗ ನಡೆದದ್ದು ಹೀಗೆ : ನಿನ್ನೆ ಗುರುವಾರ ಮುಂಬಯಿಯಿಂದ ದಿಲ್ಲಿಗೆ ಹೋಗುತ್ತಿದ್ದ ವಿಮಾನವನ್ನು ಪ್ರತಿಕೂಲ ಹವಾಮಾನದ ಕಾರಣ ಜೈಪುರಕ್ಕೆ ತಿರುಗಿಸಲಾಯಿತು. ಇದರಿಂದ ಪ್ರಯಾಣಿಕ ನಿತಿನ್ ವರ್ಮಾಗೆ ಕಿರಿಕಿರಿ ಉಂಟಾಗಿ ತಮ್ಮ ಸಿಟ್ಟನ್ನು ಟ್ವಿಟರ್‌ನಲ್ಲಿ ತೋಡಿಕೊಂಡರು. ವಿಮಾನದ ಭದ್ರತಾ ಅಧಿಕಾರಿಗಳಿಗೆ ಮಾಡಿದ ತನ್ನ ಟ್ವೀಟನ್ನು ಪ್ರಧಾನಿಗೂ ಟ್ಯಾಗ್ ಮಾಡಿದರು.
“ನರೇಂದ್ರ ಮೋದಿ ಸರ್, ನಾವು ಜೆಟ್ ಏರ್ ವೇಸ್ ವಿಮಾನದಲ್ಲಿ ಕಳೆದ 3 ತಾಸುಗಳಿಂದ ಇದ್ದೇವೆ. ಇದು ಹೈಜ್ಯಾಕ್ ಆಗಿರೋ ಹಾಗೆ ಕಾಣುತ್ತಿದೆ. ದಯವಿಟ್ಟು ಸಹಾಯ ಮಾಡಿ’ ಎಂಬುದು ನಿತಿನ್ ವರ್ಮಾ ಮಾಡಿದ್ದ ಟ್ವೀಟ್ ಆಗಿತ್ತು.
ಈ ಟ್ವೀಟನ್ನು ಗಂಭೀರವಾಗಿ ಪರಿಗಣಿಸಿದ ಭದ್ರತಾ ಅಧಿಕಾರಿಗಳು ಒಡನಯೇ ಕಾರ್ಯಾಚರಣೆಗೆ ಇಳಿದರು. ನಿತಿನ್ ವರ್ಮಾ ಸಹಿತ ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಯಾಣಿಕರನ್ನು ಹಾಗೂ ಎಂಟು ಚಾಲಕ ಸಿಬಂದಿಗಳನ್ನು ವಿಮಾನದಿಂದ ಕೂಡಲೇ ಕೆಳಗಿಳಿಸಿದರು. ವಿಮಾನವನ್ನು ಆಮೂಲಾಗ್ರವಾಗಿ ಶೋಧಿಸಿದರು.
ಅಂತಿಮವಾಗಿ ಎಲ್ಲವೂ ಸರಿಯಾಗಿದೆ ಎಂದು ಕಂಡುಕೊಳ್ಳಲಾದ ಬಳಿಕ, ಟ್ವೀಟಿಗ ನಿತಿನ್ ವರ್ಮಾ ಹೊರತು ಪಡಿಸಿ, ಎಲ್ಲ ಪ್ರಯಾಣಿಕರನ್ನು ಮರಳಿ ವಿಮಾನಕ್ಕೇರಿಸಲಾಗಿ, ವಿಮಾನವನ್ನು ದಿಲ್ಲಿಗೆ ಹಾರಿಸಲಾಯಿತು.
ವರ್ಮಾ ಅವರನ್ನು ವಶಕ್ಕೆ ತೆಗೆದುಕೊಂಡ ಭದ್ರತಾ ಪಡೆಗಳು ನಿನ್ನೆ ತಡ ರಾತ್ರಿಯ ವರೆಗೂ ಪ್ರಶ್ನಿಸಿದರು. ಐಪಿಸಿ ಸೆಕ್ಷನ್ 505ರ ಪ್ರಕಾರ ನಾವು ಆತನ ವಿರುದ್ಧ ಕೇಸು ದಾಖಲಿಸಿದ್ದೇವೆ ಎಂದು ಎಸ್‌ಎಚ್‌ಓ ಸಂಗನೇರ್ ಶಿವರತನ್ ಗೋದರ ತಿಳಿಸಿದರು.
ಈ ಘಟನೆಯ ಕುರಿತಾಗಿ ಜೆಟ್ ಏರ್ ವೇಸ್ ಹೊರಡಿಸಿದ ಪ್ರಕಟನೆಯಲ್ಲಿ “ಪ್ರಯಾಣಿಕರೋರ್ವರು ಮಾಡಿದ ಟ್ವಿಟರ್ ಸಂದೇಶವು ಭದ್ರತಾ ಬೆದರಿಕೆಯನ್ನು ಒಳಗೊಂಡಿದ್ದರಿಂದ ನಾವು ಭದ್ರತಾ ಶಿಷ್ಟಾಚಾರಗಳನ್ನು ತತ್‌ಕ್ಷಣವೇ ಪರಿಪಾಲಿಸಬೇಕಾಯಿತು’ ಎಂದು ಹೇಳಿದರು.