ಕನ್ಯಾಕುಮಾರಿ: ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿ ಜೊತೆಗಿನ ಮಾತುಕತೆಯ ವೇಳೆ ‘ಯೇಸು ಒಬ್ಬನೇ ದೇವರು’ ಎಂದು ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಭಾರತ್ ಜೋಡೊ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಇದು ಭಾರತ್ ಜೋಡೊ ಯಾತ್ರೆಯಲ್ಲ, ಭಾರತ್ ತೋಡೊ (ಒಡೆಯುವ) ಯಾತ್ರೆಯಾಗಿದೆ ಎಂದು ಟೀಕೆ ಮಾಡಿದೆ.
ಇದನ್ನೂ ಓದಿ:ಪರೀಕ್ಷೆ ಬರೆಯಲು ಉಕ್ಕಿ ಹರಿಯುವ ನದಿ ಈಜಿ ಬಂದ ಯುವತಿ: ವಿಡಿಯೋ ವೈರಲ್
“ರಾಹುಲ್ ಗಾಂಧಿಯನ್ನು ಭೇಟಿಯಾದ ಜಾರ್ಜ್ ಪೊನ್ನಯ್ಯ ಅವರು ಶಕ್ತಿ (ಮತ್ತು ಇತರ ದೇವರುಗಳು) ಭಿನ್ನವಾಗಿ ಯೇಸು ಒಬ್ಬನೇ ದೇವರು ಎಂದು ಹೇಳುತ್ತಾರೆ. ಈ ವ್ಯಕ್ತಿಯನ್ನು ಹಿಂದೂ ದ್ವೇಷಕ್ಕಾಗಿ ಈ ಹಿಂದೆ ಬಂಧಿಸಲಾಗಿತ್ತು. ಅಲ್ಲದೆ ‘ಭಾರತ ಮಾತೆಯ ಕಲ್ಮಶಗಳು ನಮ್ಮನ್ನು ಕಲುಷಿತಗೊಳಿಸಬಾರದು ಎಂದು ನಾನು ಬೂಟುಗಳನ್ನು ಧರಿಸುತ್ತೇನೆ’ ಎಂದು ಈತ ಹೇಳಿದ್ದ. ಭಾರತ್ ತೋಡೋ ಐಕಾನ್ ಗಳೊಂದಿಗೆ ಭಾರತ್ ಜೋಡೊ ಯಾತ್ರೆಯೇ? ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟೀಕೆ ಮಾಡಿದ್ದಾರೆ.
ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್, ವೀಡಿಯೊದ ಆಡಿಯೊವನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಕೇಸರಿ ಪಕ್ಷದ “ದ್ವೇಷ ಕಾರ್ಖಾನೆ” ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಭಯದಿಂದ “ದುಷ್ಕೃತ್ಯ” ದಲ್ಲಿ ತೊಡಗಿದೆ ಎಂದು ಆರೋಪಿಸಿದೆ.