ದೋಟಿಹಾಳ: ಸಮೀಪದ ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಮನೆಗಳ ಮೇಲೆ ಹಾಯ್ದು ಹೋಗಿದ್ದರಿಂದ ಗ್ರಾಮಸ್ಥರು ನಿತ್ಯ ಅಪಾಯ ಮತ್ತು ಮಳೆ ಬಂದಾಗ ವಿದ್ಯುತ್ ಸ್ಪರ್ಶ ಆಗುವುದೆಂಬ ಭಯದಲ್ಲೇ ಜೀವನ ಸಾಗಿಸುತ್ತಿದ್ದರು.
ಈ ಬಗ್ಗೆ ಅ. 8ರಂದು “ಉದಯವಾಣಿ’ ವೆಬ್‌ನಲ್ಲಿ ಮತ್ತು ಅ. 23ರಂದು “ಉದಯವಾಣಿ’ ಪತ್ರಿಕೆಯಲ್ಲಿ “ಮನೆ ಮಾಳಿಗೆಗೆ ತಾಗ್ತಿದೆ ವಿದ್ಯುತ್ ತಂತಿ!’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಮೇಲೆ ಕುಷ್ಟಗಿ ಜಿಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಮತ್ತು ತಂತಿಗಳ ಸ್ಥಳಾಂತರಕ್ಕೆ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಮಂಗಳವಾರ ಮನೆ ಮಾಳಿಗೆ ಮೇಲೆ ಹಾದುಹೋದ ವಿದ್ಯುತ್ ತಂತಿ ಸ್ಥಳಾಂತರಿಸಿದರು.
ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ನಮ್ಮ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟಣೆ ಮಾಡಿ ಇದಕ್ಕೆ ಪರಿಹಾರ ನೀಡಲು ಸಹಕರಿಸಿದ “ಉದಯವಾಣಿ’ ಪತ್ರಿಕೆಗೆ ಮತ್ತು ಸಮಸ್ಯೆಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಇನ್ಮುಂದೆ ಯಾವುದೇ ಗ್ರಾಮಗಳಲ್ಲಿ ಹೊಸ ಮನೆ ನಿರ್ಮಿಸುವ ವೇಳೆ ಕಟ್ಟಡದ ಮೇಲೆ ಅಥವಾ ಮನೆಗಳ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದರೆ ಜಿಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕಟ್ಟಡ ನಿರ್ಮಿಸಬೇಕು ಎಂದು ದೋಟಿಹಾಳ ಗ್ರಾಮದ 33 ಕೆ.ವಿ. ಉಪಕೇಂದ್ರದಲ್ಲಿ ಎಸ್‌ಒ ಮಂಜುನಾಥ ಅವರು ಮನವಿ ಮಾಡಿದ್ದಾರೆ.
ಕಡೇಕೊಪ್ಪ ಗ್ರಾಮದಲ್ಲಿ ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ಸರಿಪಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡು ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸ್ಥಳಾಂತರಿಸಿದ್ದೇವೆ. –
ದವಲಸಾಬ್ ನದಾಫ್, ಎಇಇ ಕುಷ್ಟಗಿ