Advertisement

ಲೌಕಿಕ –ಪಾರಲೌಕಿಕ ಸಾಧನೆಯ ಮೊದಲ ಬಿಂದು ಏಕಾಗ್ರತೆ

02:41 AM Aug 29, 2020 | Hari Prasad |

ಒಂದು ಭೂತಗನ್ನಡಿಯನ್ನು ತೆಗೆದುಕೊಂಡು ಅದರ ಮೂಲಕ ಸೂರ್ಯನ ಕಿರಣಗಳನ್ನು ಕಾಗದದ ಹಾಳೆಯ ಮೇಲಕ್ಕೆ ಹಾಯಿಸಿದರೆ ಅದು ಸುಡುತ್ತದೆ.

Advertisement

ಆದರೆ ಕಿರಣಗಳು ಹಾಗೆಯೇ ಕಾಗದದ ಮೇಲೆ ಬಿದ್ದರೆ ಏನೂ ಆಗುವುದಿಲ್ಲ.

ದೂರದಲ್ಲಿರುವ ವ್ಯಕ್ತಿಯನ್ನು ಕೂಗಿ ಕರೆಯಲು ನಾವು ಬಾಯಿಯ ಮುಂದೆ ಎರಡೂ ಹಸ್ತಗಳನ್ನು ಆಲಿಕೆಯಂತೆ ಹಿಡಿಯಬೇಕು.

ಆಗ ಹರಿದು ಹಂಚಿಹೋಗುವ ಸದ್ದಿನ ಅಲೆಗಳು ಒಂದೇ ಕಡೆಗೆ ಹರಿದು ನಾವು ಕೂಗಿದ್ದು ಕೇಳಿಸುತ್ತದೆ.

ಏಕಾಗ್ರತೆ ಅಂದರೆ ಹೀಗೆ ಎನ್ನುತ್ತಾರೆ ಸ್ವಾಮಿ ಶಿವಾನಂದರು. ನೂರು ದಿಕ್ಕಿಗೆ ಹರಿಯುವ ಮನಸ್ಸಿನ ಆಲೋಚನೆಗಳನ್ನು ಒಂದು ಕಡೆಗೆ ನೆಡುವುದೇ ಏಕಾಗ್ರತೆ.

Advertisement

ಏಕಾಗ್ರಗೊಂಡ ಮನಸ್ಸು ಪ್ರಬಲವಾದ ಒಂದು ದೀವಿಗೆಯಂತೆ; ಅದರ ಬೆಳಕನ್ನು ಉಪಯೋಗಿಸಿ ಆತ್ಮ, ಪರಮಾತ್ಮ, ಮೋಕ್ಷ ಮತ್ತು ಸಚ್ಚಿದಾನಂದಗಳನ್ನು ಹುಡುಕಿಕೊಳ್ಳಬಹುದು.

ಏಕಾಗ್ರತೆಯ ಸಮಯದಲ್ಲಿ ಮನಸ್ಸಿನ ಎಲ್ಲ ಯೋಚನೆಗಳು ಒಂದು ದಿಕ್ಕಿನತ್ತ ಹರಿಯುತ್ತವೆ. ಒಂದೇ ಆಲೋಚನೆಯು ಮನಸ್ಸನ್ನು ಆದ್ಯಂತವಾಗಿ ಆಕ್ರಮಿಸಿರುತ್ತದೆ.

ಏಕಾಗ್ರತೆಯನ್ನು ಹಿಂಬಾಲಿಸಿ ಬರುವುದು ಧ್ಯಾನ. ಏಕಾಗ್ರತೆಯ ಧ್ಯಾನದಿಂದಲೇ ಸಮಾಧಿ ಸ್ಥಿತಿ ಸಾಧ್ಯವಾಗುವುದು. ನಿರ್ವಿಕಲ್ಪ ಸಮಾಧಿ ಎಂದರೆ ದ್ವಂದ್ವಮಯವಾದ ಎಲ್ಲ ಆಲೋಚನೆಗಳಿಂದ ಮುಕ್ತಿ ಹೊಂದಿದ ಸ್ಥಿತಿ. ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರಷ್ಟೇ ಜೀವನ್ಮುಕ್ತ ಸ್ಥಿತಿಯುಂಟಾಗಲು ಸಾಧ್ಯ. ಆದ್ದರಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಏಕಾಗ್ರತೆಯ ಸಾಧನೆಯೇ ಆರಂಭದ ಹೆಜ್ಜೆ.

ಮನಸ್ಸು ಏಕಾಗ್ರಗೊಂಡಿರುವಾಗ ಇಂದ್ರಿಯಗಳು ತಮ್ಮ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ. ನಾವು ಯಾವುದೋ ಒಂದು ಅತ್ಯಂತ ಆಸಕ್ತಿದಾಯಕ ಪುಸ್ತಕವನ್ನು ಓದುತ್ತಿದ್ದೇವೆ ಅಥವಾ ಟಿವಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೇವೆ ಎಂದಿಟ್ಟುಕೊಳ್ಳಿ.

ಅಮ್ಮ ಊಟಕ್ಕೆ ಕರೆಯುವುದು ಅಥವಾ ನಮ್ಮ ಹತ್ತಿರ ಯಾರೋ ಬಂದು ನಿಂತದ್ದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಹತ್ತಿರ ತಂದಿಟ್ಟ ಪಾಯಸದ ಪರಿಮಳ ವನ್ನೂ ಮೂಗು ಗ್ರಹಿಸುವುದಿಲ್ಲ. ಅತ್ಯಂತ ಆಸಕ್ತಿಯಿಂದ ಓದುತ್ತಿರುವಾಗ ಸೊಳ್ಳೆ ಕಚ್ಚಿದರೂ ಗೊತ್ತಾಗುವುದಿಲ್ಲ. ಏಕಾಗ್ರತೆ ಅಂದರೆ ಇದು, ಮನಸ್ಸು ಸೂಜಿಯ ಮೊನೆಯಂತೆ ಒಂದೆಡೆ ಕೇಂದ್ರೀಕೃತವಾಗುವುದು.

ದೇವರು, ಆತ್ಮ ಅಥವಾ ಪಾರಮಾರ್ಥಿಕವಾಗಿ ಚಿಂತಿಸುವಾಗ ಇಂತಹ ಏಕಾಗ್ರತೆಯನ್ನು ಹೊಂದಿರಬೇಕು. ಏಕಾಗ್ರತೆ ಅಥವಾ ಧಾರಣ ಎಂದರೆ ಒಂದು ಕಡೆ ಮನಸ್ಸನ್ನು ನೆಡುವ ಶಕ್ತಿ. ವೇದಾಂತಿಗಳು ಮನಸ್ಸನ್ನು ಆತ್ಮದೆಡೆಗೆ ನೆಟ್ಟಿರುತ್ತಾರೆ. ಅದು ಅವರ ಧಾರಣ. ಭಕ್ತರು ಇಷ್ಟದೇವತೆಯಲ್ಲಿ ಮನಸ್ಸು ನೆಡುತ್ತಾರೆ, ಅದು ಅವರ ಧಾರಣ.
ಮನಸ್ಸನ್ನು ಏಕಾಗ್ರಗೊಳಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ಅದು ಬದಲಾಗುತ್ತದೆ.

ಮನಸ್ಸನ್ನು ಒಂದು ಗುರಿಯತ್ತ ನೆಡುವ ಶಕ್ತಿಯನ್ನು ಹರಿತಗೊಳಿಸುವುದೇ ಆಧ್ಯಾತ್ಮಿಕ ಸಾಧನೆಯ ಹಾದಿಯ ಮೊದಲ ಮೆಟ್ಟಿಲು. ಆಧ್ಯಾತ್ಮಿಕ ಸಾಧನೆ ಮಾತ್ರವೇ ಅಲ್ಲ; ಲೌಕಿಕದಲ್ಲೂ ಏನಾದರೂ ಸಾಧಿಸಬೇಕಿದ್ದರೆ ಏಕಾಗ್ರತೆ ಬೇಕೇ ಬೇಕು. ನೂರು ಕಡೆಗೆ ನುಗ್ಗುವುದು ಮನಸ್ಸಿನ ಸ್ವಭಾವ. ಅದಕ್ಕೆ ಮೂಗುದಾರ ತೊಡಿಸಿ ಒಂದು ಕಡೆಗೆ ಹರಿಸಿದರೆ ಮಾತ್ರ ಅಂದುಕೊಂಡದ್ದನ್ನು ಸಾಕಾರಗೊಳಿಸುವುದಕ್ಕೆ ಸಾಧ್ಯ. ಲೌಕಿಕ ಮತ್ತು ಪಾರಲೌಕಿಕ ಸಾಧನೆಗಳೆರಡೂ ಆರಂಭವಾಗುವ ಮೊದಲ ಬಿಂದು ಏಕಾಗ್ರತೆ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next