ನಾವೆಲ್ಲರೂ ಸಂತೋಷವನ್ನು ಬಯಸುವುದರಲ್ಲಿ ಸಮಾನರು. ಎಲ್ಲರಿಗೂ ಅದು ಬೇಕು. ಸಂತೋಷವನ್ನು ಇಷ್ಟಪಡದವರು ಯಾರೂ ಇಲ್ಲ.
ಅದರಲ್ಲೂ ದುಃಖದ ಲವಲೇಶವೂ ಇಲ್ಲದ ಶುದ್ಧ ಸಂತೋಷ ಬೇಕು. ಮನುಷ್ಯರು ಮಾತ್ರ ಅಲ್ಲ, ಸಜೀವವಾಗಿರುವ ಎಲ್ಲವೂ ಸಂತೋಷವಾಗಿರಲು ಬಯಸುತ್ತವೆ.
ಯಾರಿಗೂ ಕಷ್ಟ, ದುಃಖ, ದುಮ್ಮಾನ, ದುಗುಡ ಬೇಡ. “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಹಾಗೆ, ನಾವು ಈ ಬದುಕಿನಲ್ಲಿ ಮಾಡುವ ಪ್ರತಿಯೊಂದು ಚಟುವಟಿಕೆ, ಪ್ರಯತ್ನ, ಸಾಧನೆ, ಪರಿಶ್ರಮ… ಎಲ್ಲದರ ಉದ್ದೇಶ ಒಂದೇ – ಸುಖ ಮತ್ತು ಸಂತೋಷ. ಕಾರು ಖರೀದಿಸುವುದರಿಂದ ಸುಖ ಸಂತೋಷ ಸಿಗುತ್ತದೆ ಎಂಬುದರಿಂದ ಅದಕ್ಕಾಗಿ ಹಣ ಕೂಡಿಡುತ್ತೇವೆ. ಅದಕ್ಕಾಗಿ ಹೆಚ್ಚು ಶ್ರಮ ವಹಿಸಿ ದುಡಿಯುತ್ತೇವೆ. ಹಾಗಾಗಿ ನಮ್ಮ ಅಸ್ತಿತ್ವಕ್ಕೆ ಒಂದು ಗುರಿ ಎಂಬುದಿದ್ದರೆ ಅದು ಸಂತೋಷವೇ ವಿನಾ ಬೇರೇನೂ ಅಲ್ಲ ಎನ್ನುತ್ತಾರೆ ಶ್ರೀ ರಮಣ ಮಹರ್ಷಿಗಳು.
ಈ ಸಂತೋಷವನ್ನು ಯಾರಿಗಾಗಿ ಬಯಸು ತ್ತಿದ್ದೇವೆ? ನಿಸ್ಸಂಶಯವಾಗಿ ನಮಗಾಗಿಯೇ. ನಮ್ಮ ಹೆಂಡತಿ, ಮಕ್ಕಳು, ನಮ್ಮ ತಾಯ್ತಂದೆ, ನೆರೆಯವರು ಕೂಡ ಸಂತೋಷ ವಾಗಿರಬೇಕು, ಸುಖೀಯಾಗಿರಬೇಕು ಎಂದು ನಾವು ಬಯಸುತ್ತೇವೆ, ಯಾಕಾಗಿ? ಅದರಿಂದ ನಮಗೆ ಸಂತೋಷ ಸಿಗುತ್ತದೆ. ಮನೆಯಲ್ಲಿ ಯಾರಿಗೋ ಅನಾರೋಗ್ಯವಿದ್ದರೆ ನಾವು ಸುಖೀಯಾಗಿರುವುದಿಲ್ಲ. ಮಕ್ಕಳ ಶಿಕ್ಷಣ ಚೆನ್ನಾಗಿ ಆಗದಿದ್ದರೆ ನಮಗೆ ಚಿಂತೆಯಾಗುತ್ತದೆ. ಹಾಗಾಗಿ ಅವರು ಕ್ಷೇಮವಾಗಿರಬೇಕು, ಸುಖವಾಗಿರಬೇಕು, ಸಂತೋಷದಿಂದ ಇರಬೇಕು ಎಂದು ಹಾರೈಸುತ್ತೇವೆ. ಅಂದರೆ ನಮ್ಮ ಹಾರೈಕೆಯ ಅಂತಿಮ ಉದ್ದೇಶ ನಮ್ಮ ಸುಖ ಸಂತೋಷ.
ಕೇವಲ ಸುಖ-ಸಂತೋಷ ಮಾತ್ರ ಅಲ್ಲ; ನಾವು ಸಹಾನುಭೂತಿ, ಕರುಣೆ, ಔದಾರ್ಯಗಳನ್ನು ತೋರುವುದು ಕೂಡ ಇದೇ ಹಾರೈಕೆಯಿಂದ. ಯಾರಾದರೂ ಕಷ್ಟದಲ್ಲಿದ್ದರೆ ಅದು ನಮಗೆ ಸಂಕಟವನ್ನು ತರುತ್ತದೆ. ಹಾಗಾಗಿ ಅವರಿಗೆ ಸಹಾಯ ಮಾಡುತ್ತೇವೆ. ಆದ್ದರಿಂದ ಅತ್ಯಂತ ನಿಸ್ವಾರ್ಥವಾದ ಪ್ರೀತಿಯೂ ಕೂಡ ನಮ್ಮ ಸಂತೋಷವನ್ನು ಸಾಧಿಸುವ ಮೂಲಭೂತ ಬಯಕೆಯನ್ನು ಆಳದಲ್ಲಿ ಹೊಂದಿರುತ್ತದೆ.
ನಾವೇಕೆ ಸಂತೋಷವಾಗಿರಲು ಬಯಸುತ್ತೇವೆ ಎಂದರೆ, ನಮ್ಮನ್ನು ನಾವು ಪ್ರೀತಿಸುತ್ತೇವೆ. ಹೆಂಡತಿ, ಮಕ್ಕಳು, ಹೆತ್ತವರು, ನೆರೆಯವರು – ಹೀಗೆ ಇತರರನ್ನು ನಾವೆಷ್ಟೇ ಪ್ರೀತಿಸಲಿ; ಅದಕ್ಕಿಂತ ನಮ್ಮ ಬಗ್ಗೆ ನಮಗಿರುವ ಪ್ರೀತಿ ಒಂದು ತೂಕ ಹೆಚ್ಚು. ಪ್ರೀತಿಯಿಂದ ನಮಗೆ ಸಂತೋಷ ಸಿಗುತ್ತದೆ. ಹಾಗಾಗಿ ನಮ್ಮನ್ನು, ಇತರರನ್ನು ನಾವು ಪ್ರೀತಿಸುತ್ತೇವೆ.
ಮನುಷ್ಯ ಮತ್ತು ಎಲ್ಲ ಸಜೀವಿಗಳ ಮೂಲ ಸ್ಥಿತಿ ಸಂತೋಷ. ನಮ್ಮ ಮೂಲಪ್ರಕೃತಿ ಸಂತೋಷ. ಈ ಅರಿವು ನಮ್ಮಲ್ಲಿ ಉಂಟಾದರೆ ನಮ್ಮ ಬಗ್ಗೆ, ನಮ್ಮ ಬದುಕಿನ ಬಗ್ಗೆ ನಮಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆಗ ನಮ್ಮ ಸುತ್ತಲಿನ ಎಲ್ಲವನ್ನೂ ಪ್ರೀತಿ ವಾತ್ಸಲ್ಯಗಳಿಂದ, ಕರುಣೆಯಿಂದ, ಸಹಾನುಭೂತಿಯಿಂದ ಕಾಣುವುದು ಸಾಧ್ಯವಾಗುತ್ತದೆ. ನಮ್ಮ ಮೂಲಸ್ಥಿತಿ, ಮೂಲ ಪ್ರಕೃತಿಯ ಬಗೆಗಿನ ಈ ಅರಿವು ನಮ್ಮ ಬದುಕನ್ನು ಬಹಳ ದೊಡ್ಡ ಮಟ್ಟದಲ್ಲಿ ಬದಲಾಯಿಸುವಂಥದ್ದು. ಜೀವನದ ದಾರಿಯನ್ನು ಬದಲಾಯಿಸಿ ಹೊಸ ಬದುಕಿನ ಕಡೆಗೆ ಒಯುತ್ತದೆ. ಆಗ ಆತ್ಯಂತಿಕವಾದ ಸಂತೋಷ, ಸಂತೃಪ್ತಿ ನಮ್ಮೊಳಗಿನಿಂದ ಉದಯಿಸುತ್ತದೆ.