‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬೊಂದು ನಾಣ್ನುಡಿ ಕನ್ನಡದಲ್ಲಿದೆ. ಕಟ್ಟುವುದು, ನಿರ್ಮಿಸುವುದು, ರಚಿಸುವುದು ಕಷ್ಟ, ಆದರೆ ಕೆಡವುದು ಸುಲಭ ಎಂಬುದಿದರ ಅರ್ಥ. ಕಟ್ಟುವುದು ಅಂದರೆ ಹೊಸತು; ನವೀನವಾದದ್ದನ್ನು ಮಾತ್ರ ನಾವು ನಿರ್ಮಿಸುತ್ತೇವೆ,ನೂತನವಾಗಿರುವುದನ್ನು ರಚಿಸುತ್ತೇವೆ. ಅದು ಬಹಳ ಕಷ್ಟದ ಕೆಲಸ, ಅದು ರಚನಾತ್ಮಕ ಕಾರ್ಯ, ಸೃಜನಶೀಲ ವಾದುದು. ಆದರೆ ಟೀಕೆ, ವಿಮರ್ಶೆ ಸುಲಭ; ತಪ್ಪು ಹುಡುಕಿದರಾಯಿತು.
ಸಕಾರಾತ್ಮಕ ಬದುಕಿನ ದಾರಿ ಹೊಸತನ್ನು ನಿರ್ಮಿಸುವುದಾಗಿರಬೇಕು; ಕೆಡವುದು ಅಥವಾ ಟೀಕಿಸುವುದಲ್ಲ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್ ಅವರು.
ಜಗತ್ತಿನಲ್ಲಿ ಇವತ್ತು ಎತ್ತ ಕಡೆ ನೋಡಿದರೂ ಟೀಕೆಗಳು, ವಿಮರ್ಶೆಗಳು, ವಿರೋಧಗಳೇ ಹೆಚ್ಚು ಕಂಡುಬರುತ್ತಿವೆ. ಸಾಮಾನ್ಯವಾಗಿ ನಮಗೆ ಟೀಕಾಕಾರರು, ವಿಮರ್ಶಕರೇ ಹೆಚ್ಚು ಬುದ್ಧಿವಂತರಂತೆ ಕಂಡುಬರುತ್ತಾರೆ. ಆದರೆ ಸದ್ಗುರು ಅವರ ಪ್ರಕಾರ ಟೀಕೆ, ವಿಮರ್ಶೆಗಳು ಹೊಸದರ ನಿರಾಕರಣೆ, ನೂತನವಾದುದನ್ನು ಸ್ವೀಕರಿಸಲು ಸಿದ್ಧವಿಲ್ಲದಿರುವಿಕೆ ಮತ್ತು ಪ್ರೌಢಿಮೆ ಇಲ್ಲದಿರುವುದರ ಸಂಕೇತ.
ವಿವೇಕ, ಬುದ್ಧಿಗಳು ಪ್ರೌಢವಾಗಿಲ್ಲದೆ ಇದ್ದಾಗ ಅದು ನಿರಾಕರಣೆಯ ಮೂಲಕ ಅಭಿವ್ಯಕ್ತಿ ಕಂಡುಕೊಳ್ಳುತ್ತದೆ. ಟೀಕೆ, ವಿಮರ್ಶೆ, ನಿರಾಕರಣೆಗಳು ಆಕರ್ಷಕವಾಗಿ ಕಂಡುಬರುವುದಕ್ಕೆ ಇನ್ನೊಂದು ಕಾರಣ ಎಂದರೆ ಅದು ಹೊಸದನ್ನು ಸೃಷ್ಟಿಸುತ್ತಿಲ್ಲ, ನವೀನವಾದುದನ್ನು ಖಂಡಿಸುತ್ತಿರುತ್ತದೆ.
ಹೊಸತು ಮತ್ತು ಹೊಸತನ್ನು ಸೃಷ್ಟಿಸು ವವರು ಗಮನ ಸೆಳೆಯುವುದಿಲ್ಲ, ಆಕರ್ಷಕ ಎನಿಸುವುದಿಲ್ಲ. ಏಕೆಂದರೆ, ನವೀನವಾದದ್ದನ್ನು ಸೃಷ್ಟಿಸುವಾಗ ತಪ್ಪುಗಳು ಸಂಭವಿಸುತ್ತವೆ. ಮಗು ಎದ್ದು ಬಿದ್ದೇ ನಡೆಯಲು ಕಲಿಯು ತ್ತದೆ. ಸೋಲುಗಳು, ಪ್ರಮಾದಗಳಿಂದ ಪಾಠ ಕಲಿಯುತ್ತಲೇ ಸೃಜಿಸುವ ಪ್ರಕ್ರಿಯೆ ನಡೆಯುತ್ತದೆ. ಥಾಮಸ್ ಅಲ್ವಾ ಎಡಿಸನ್ ಒಂದೇಟಿಗೆ ವಿದ್ಯುದ್ದೀಪವನ್ನು ಆವಿಷ್ಕರಿ ಸಲಿಲ್ಲ. ನೂರಾರು ದೀಪಗಳನ್ನು ನಿರ್ಮಿಸಿ ವಿಫಲನಾದ, ಆ ದಾರಿಯಲ್ಲಿ ಯಾವುದು ಸರಿ ಎಂಬುದನ್ನು ಕಲಿಯುತ್ತ ಕೊನೆಗೆ ಯಶಸ್ವಿಯಾದ. ಆದರೆ ಆಗಲೂ, ಈಗಲೂ ಎಡಿಸನ್‌ನ ಆವಿಷ್ಕಾರದ ಬಗ್ಗೆ ಟೀಕೆ ನಮಗೆ ಆಕರ್ಷಕವಾಗಿ ಕಾಣಿಸುತ್ತದೆ.
ಪ್ರಶ್ನಿಸುವುದರಲ್ಲಿ ತಪ್ಪಿಲ್ಲ. ಯಾರನ್ನಾದರೂ ನಾವು ಟೀಕಿಸುವುದಾದರೆ, ಖಂಡಿಸುವುದಾದರೆ, ವಿಮರ್ಶಿಸುವುದಾದರೆ ಅದರ ಹಿಂದೆ ಸರಿಪಡಿಸುವ ಉದ್ದೇಶ ಇರಬೇಕು. ವೃಥಾ ಟೀಕಿಸುವುದು ನಕಾರಾತ್ಮಕ ದೃಷ್ಟಿಯದಾಗಿರುತ್ತದೆ. ವಿವೇಕ, ಬುದ್ಧಿ ಮಾಗಿದಂತೆ ನಾವು ಎಲ್ಲವನ್ನೂ ಸ್ವೀಕರಿಸಲು ಕಲಿಯುತ್ತೇವೆ, ಈ ಶ್ರೇಷ್ಠ ಬದುಕಿನ ಆಳದಲ್ಲೊಂದು ಸಂತುಲಿತ ಸೂತ್ರವಿರುವುದು ಬುದ್ಧಿ- ವಿವೇಕಗಳು ಬೆಳೆದಂತೆ ನಮಗೆ ಅರ್ಥವಾಗಲು ಆರಂಭ ವಾಗುತ್ತದೆ. ಆಗ ನಾವು ಕಾರ್ಯ- ಕಾರಣ, ತರ್ಕಗಳಿಗೆ ಜೋತು ಬಿದ್ದು ವಾದಿಸುವುದಿಲ್ಲ; ಬದುಕಿನ ಶ್ರೇಷ್ಠತೆ ಆಗ ನಮಗೆ ಅರಿವಾಗಿರುತ್ತದೆ.
ಬದುಕಿನಲ್ಲಿ ಸಕಾರಾತ್ಮಕವಾಗಿರಬೇಕು ಎನ್ನುವುದು ಇದೇ ಕಾರಣಕ್ಕೆ. ಎದುರಾಗುವ ಹೊಸ ಹೊಸತನ್ನು ನಿರಾಕರಿಸುತ್ತ ಹೋದರೆ ಬೆಳೆಯಲಿಕ್ಕಾಗುವುದಿಲ್ಲ, ಪ್ರಗತಿ ಸಾಧ್ಯವಾಗುವುದಿಲ್ಲ. ನಕಾರಾತ್ಮಕವಾಗಿರುವುದೇ ಜೀವನದ ಪರಮ ಮಂತ್ರವಾಗಿ ಬಿಡುತ್ತದೆ. ಆಗ ಬದುಕು ಕೂಡ ಪೊರೆ ಕಳಚುತ್ತ ಹೊಸದಾಗುತ್ತಿರುವುದಿಲ್ಲ, ನಿಂತ ನೀರಾಗುತ್ತ ಹೋಗುತ್ತದೆ. ಹೊಸತನ್ನು ಸೃಷ್ಟಿಸುವುದು, ನವೀನವಾದುದನ್ನು ಸ್ವೀಕರಿಸುವುದು, ನೂತನ ವಾದುದಕ್ಕೆ ಒಗ್ಗಿಕೊಳ್ಳುವುದು ಸಕ್ರಿಯ, ಸೃಜನಶೀಲ, ಸಕಾರಾತ್ಮಕ ಬದುಕಿನ ಮಂತ್ರ.
(ಸಂಗ್ರಹ)