Advertisement
ಹಲವು ದಿನಗಳ ಕಾಲ ಅವನಿಗೆ ಏನನ್ನೂ ಹೇಳಿಕೊಡಲಿಲ್ಲ.
Related Articles
Advertisement
ಅರಣ್ಯದಲ್ಲಿ ಅವನಿಗೆ ಎಲ್ಲರೂ ಸ್ನೇಹಿತರೇ. ವಾತ್ಸಲ್ಯಮಯಿ ಹಸುಗಳು, ವನ್ಯಪಶುಗಳು, ಹಕ್ಕಿಗಳು, ಮರಗಿಡಗಳು, ಉಯ್ಯಾಲೆಯಾಡುವ ಗಾಳಿ, ತೊರೆ, ಸೂರ್ಯ-ಚಂದ್ರರು, ನಕ್ಷತ್ರಗಳು – ಪ್ರತಿಯೊಂದೂ ಸತ್ಯಕಾಮನಿಗೆ ಒಂದಲ್ಲ ಒಂದು ಬಗೆಯ ಜ್ಞಾನವನ್ನು ಉಣಿಸಿದವು.
ದಟ್ಟ ಅರಣ್ಯದ ಪ್ರಶಾಂತಿಯನ್ನು ಅನುಭವಿಸುತ್ತ ವರುಷಾನುಗಟ್ಟಲೆ ಬದುಕಿದ ಸತ್ಯಕಾಮ ಇವೆಲ್ಲವೂ ಅಲೌಕಿಕ ಸತ್ಯದ ಭಾಗ ಎಂಬುದನ್ನು ಅರಿತುಕೊಂಡ.
ಪಶುಗಳ ಹಿಂಡಿನ ನಾಯಕನಾಗಿದ್ದ ವೃದ್ಧ ವೃಷಭ ಆತನಿಗೆ ಪಿಸುನುಡಿಯಿತು, ‘ನಿಜ, ನೀನು ಪ್ರತೀ ದಿನ ಕಾಣುವ ಆಕಾಶದಷ್ಟೇ ಅನಂತವಾದುದು ಬ್ರಹ್ಮ’.
ರಾತ್ರಿ ಹಸುಗಳೆಲ್ಲ ನಿದ್ದೆಹೋದ ಬಳಿಕ ಆತ ಶಿಬಿರಾಗ್ನಿಯನ್ನು ಹೊತ್ತಿಸಿದ. ಅದರ ಜ್ವಾಲೆ ನರ್ತಿಸುತ್ತ ಮಾತನಾಡಿತು.
ನಕ್ಷತ್ರಗಳು ಮಿನುಗುವ ರಾತ್ರಿಯಾಗಸವು ಆತ್ಮವೊಂದೇ ಸತ್ಯ, ಅದು ಅವಿನಾಶಿ; ಕತ್ತಲು ಮತ್ತು ಬೆಳಕು, ಕಾಲಕೆಳಗಿನ ಭೂಮಿ, ಆಕಾಶ, ಗಾಳಿ ಎಲ್ಲವೂ ಬ್ರಹ್ಮನ ಭಾಗವೇ ಎಂದಿತದು.
ಇಬ್ಬನಿ ತೂಗುವ ಹುಲ್ಲಿನೆಳೆಗಳನ್ನು ಸೋಕುವ ಬಾಲಸೂರ್ಯನ ಕಿರಣಗಳು, ಮರಗಿಡಗಳನ್ನು ಮೀಯಿಸುವ ಮಧ್ಯಾಹ್ನದ ಪ್ರಖರ ಸೂರ್ಯ, ಅಸ್ತಮಿಸುವ ಸೂರ್ಯನ ವೈಭವವನ್ನು ಪ್ರತಿಫಲಿಸುವ ಸಂಜೆಯ ಮೋಡಗಳು ಕೂಡ ಸತ್ಯಕಾಮನಿಗೆ ಬ್ರಹ್ಮ ರಹಸ್ಯವನ್ನು ಹೇಳಿಕೊಟ್ಟವು.
ಇವೆಲ್ಲವನ್ನೂ ಕಾಣುವ ಕಣ್ಣುಗಳು, ಪ್ರತಿಯೊಂದರಲ್ಲೂ ನಾಟ್ಯವಾಡುವ ಜೀವಸೆಲೆ, ಎಲ್ಲದರ ಬಗೆಗೂ ಬೆರಗುಪಡುವ ಮನಸ್ಸು ಕೂಡ ಬ್ರಹ್ಮನ ಭಾಗವೇ ಎಂಬ ಪರಮ ರಹಸ್ಯ ಸತ್ಯಕಾಮನಿಗೆ ಅರಿವಾಯಿತು. ಋತುಗಳ ಅನಂತ ಚಕ್ರವು ಅವನ ಬಗೆಗಣ್ಣಿಗೆ ಹುಟ್ಟು, ಬೆಳವಣಿಗೆ ಮತ್ತು ಮೃತ್ಯುವಿನ ಸೂತ್ರವನ್ನು ಕಾಣಿಸಿತು. ಸ್ಪರ್ಶ, ರುಚಿ, ಶ್ರವಣ, ವಾಚಿಕ, ದೃಷ್ಟಿಗಳಲ್ಲಿ, ಹೃದಯದ ಮಿಡಿತದಲ್ಲಿ, ಎಚ್ಚರ ಮತ್ತು ಸುಷುಪ್ತಿಯಲ್ಲೆಲ್ಲವೂ ಇರುವುದು ಬ್ರಹ್ಮನೇ ಎಂಬ ಸತ್ಯ ಹೊಳೆಯಿತು.
ಇಂಥ ಮಹಾಜ್ಞಾನವನ್ನು ಪ್ರಕೃತಿಯ ಸ್ನೇಹದಿಂದ ಗಳಿಸಿ ಒಂದು ಬೆಳಗ್ಗೆ ಕುಳಿತಿದ್ದ ಸತ್ಯಕಾಮನಲ್ಲಿಗೆ ಹಿಂಡಿನ ನಾಯಕ ಮುದಿ ವೃಷಭ ಬಂದು ಹೇಳಿತು, ‘ನಾವು ಸಾವಿರವಾಗಿದ್ದೇವೆ, ಆಶ್ರಮಕ್ಕೆ ಮರಳ್ಳೋಣ’.
ಪ್ರಕೃತಿಯೆದುರು ವಿನಮ್ರತೆಯಿಂದ ತಲೆಬಾಗಿದರೆ ನಾವು ಏನನ್ನೆಲ್ಲ ಕಲಿಯಬಹುದು ಎಂಬುದನ್ನು ಛಾಂದೋಗ್ಯ ಉಪನಿಷತ್ತಿನ ಈ ಕಥೆ ಬಹು ಸುಂದರವಾಗಿ ಹೇಳುತ್ತದೆ.
ನಿಸರ್ಗದೊಂದಿಗೆ ಒಂದಾಗಿ ಬದುಕಿದ ನಮ್ಮ ಹಿರಿಯರು – ಪೂರ್ವಜರು ಕೂಡ ಸಾಕ್ಷರರಿಗಿಂತ ಹೆಚ್ಚು ಘನವಾದ ಸತ್ಯಗಳನ್ನು, ಸದ್ಗುಣಗಳನ್ನು, ಬದುಕಿನ ಕಡೆಗೆ ಸಕಾರಾತ್ಮಕ ಕಾಣ್ಕೆಯನ್ನು ಹೊಂದಿದ್ದುದಕ್ಕೆ ಕಾರಣ ಇದುವೇ. ನಾವು ಕೂಡ ಬದುಕಬೇಕಿರುವುದು ಹೀಗೆಯೇ.
(ಸಂಗ್ರಹ)