Advertisement

ಎತ್ತರದ ಬಿದಿರು, ಎಳೆ ಬಿದಿರು ಮತ್ತು ನಿಜದ ಬದುಕು

02:20 AM Oct 06, 2020 | Hari Prasad |

ಜಗತ್ತು ನಮ್ಮ ಅನುಭವಕ್ಕೆ ಬರುವುದು ಪಂಚೇದ್ರಿಯಗಳ ಗ್ರಹಿಕೆಯ ಮೂಲಕ. ಕಣ್ಣು, ಚರ್ಮ, ನಾಲಗೆ, ಮೂಗು, ಕಿವಿಗಳು ಏನು ಚಿತ್ರಣವನ್ನು ಕಟ್ಟಿಕೊಡುತ್ತವೆಯೋ ಅದು ನಿಜ ಎಂಬುದಾಗಿ ನಾವು ಪರಿಭಾವಿಸುತ್ತೇವೆ.

Advertisement

ಐದು ಇಂದ್ರಿಯಗಳಿಂದ ಅನುಭವಕ್ಕೆ ಬರುವ ಜಗತ್ತಿನ ಚಿತ್ರಣದ ಗ್ರಹಿಕೆಗೆ ಆಧಾರವಾಗಿರುವುದು ಹೋಲಿಕೆ.

ನಿನ್ನೆಯ ಬೆಂಡೆ ಸಾಂಬಾರಿಗಿಂತ ಇವತ್ತಿನದ್ದು ಖಾರವಾಗಿದೆ, ಚಹಾ ಇವತ್ತು ಹೆಚ್ಚು ಬಿಸಿಯಾಗಿದೆ, ಮದ್ದಳೆಯ ನಾದ ಚೆಂಡೆಗಿಂತ ಕಡಿಮೆ… ಹೀಗೆ ಹೋಲಿಕೆ ಸಾಗುತ್ತದೆ.

ಒಂದು ಝೆನ್‌ ಕಥೆ ಹೀಗಿದೆ.
ಬುದ್ಧನ ಬಗ್ಗೆ ಕೇಳಿತಿಳಿದ ಒಬ್ಬ ಜ್ಞಾನಾಕಾಂಕ್ಷಿ ತಾನೂ ಅವನಂತಾಗಬೇಕು ಎಂದು ಬಯಸಿದ. ಅನೇಕ ಮಂದಿ ಗುರುಗಳ ಬಳಿಗೆ ಹೋಗಿ ಜ್ಞಾನಮಾರ್ಗವನ್ನು, ಬುದ್ಧನಂತಾಗುವುದನ್ನು ಹೇಳಿಕೊಡಲು ವಿನಂತಿಸಿಕೊಂಡ. ಆದರೆ ಯಾರು ಕೊಟ್ಟ ಉತ್ತರವೂ ಅವನಿಗೆ ಸಮಾಧಾನ ತರಲಿಲ್ಲ. ಬುದ್ಧನಂತಾಗುವ ಹಂಬಲವೂ ಇಂಗಲಿಲ್ಲ.

ಹೀಗೆ ಹುಡುಕಾಡುತ್ತಿರಲಾಗಿ, ಇವೊ ಪ್ರಾಂತ್ಯದ ಬೆಟ್ಟದ ಮೇಲೆ ಮಠ ಸ್ಥಾಪಿಸಿಕೊಂಡಿರುವ ಇಕು- ಚಿನ್‌ ಎಂಬೊಬ್ಬ ಗುರುಗಳು ಬುದ್ಧನಂತಾಗುವ ಉಪ ದೇಶ ನೀಡಲು ಸಮರ್ಥರು ಎಂದು ಯಾರೋ ಹೇಳಿದರು. ಜ್ಞಾನಾಕಾಂಕ್ಷಿ ತಡಮಾಡದೇ ಇಕು-ಚಿನ್‌ ಅವರನ್ನು ಹುಡುಕುತ್ತ ಹೊರಟ.

Advertisement

ದುರ್ಗಮ ಬೆಟ್ಟವನ್ನು ಏರಿದ ಮೇಲೆ ಗುರುಮಠ ಕಾಣಿಸಿತು. ವಿಶಾಲ ಪ್ರಾಂಗಣದಲ್ಲಿ ಇಕು-ಚಿನ್‌ ಗುರುಗಳು ಕುಳಿತಿದ್ದರು, ಸುತ್ತಲೂ ದೊಡ್ಡ ಶಿಷ್ಯ ಸಮೂಹ. ಜ್ಞಾನಾಕಾಂಕ್ಷಿ ಎಲ್ಲರಿಗಿಂತ ಹಿಂದೆ ನಿಂತುಕೊಂಡ. ಗುರುಗಳು ಅವನನ್ನು ಗಮನಿಸಿ ಹತ್ತಿರ ಕರೆದರು, ಏಕೆ ಬಂದಿದ್ದೀಯೆ ಎಂದು ವಿಚಾರಿಸಿದರು. ಜ್ಞಾನಾಕಾಂಕ್ಷಿ ತನ್ನ ಹಂಬಲವನ್ನು ಹೇಳಿಕೊಂಡಾಗ ಸುತ್ತಲೂ ಇರುವ ಶಿಷ್ಯರನ್ನು ತೋರಿಸಿ, “ಇವರನ್ನೆಲ್ಲ ಕಳುಹಿಸಿದ ಬಳಿಕ ನಿನಗೆ ಉಪದೇಶ ನೀಡುವೆ’ ಎಂದರು.

ನೆರೆದಿದ್ದ ಶಿಷ್ಯಸಮೂಹವನ್ನು ಕಂಡು ಜ್ಞಾನಾಕಾಂಕ್ಷಿಗೆ ಇವರು ತಕ್ಕ ಗುರು ಎನ್ನಿಸಿತು. ಆತ ಕಾತರದಿಂದ ಕಾದ.
ಸಾಕಷ್ಟು ಸಮಯ ಕಳೆದ ಬಳಿಕ ಎಲ್ಲರೂ ಹೋಗಿಯಾಯಿತು. ಇಕು-ಚಿನ್‌ ಜ್ಞಾನಾಕಾಂಕ್ಷಿಯನ್ನು ಕರೆದುಕೊಂಡು ಆಶ್ರಮದ ಹೊರಗಿದ್ದ ಬಿದಿರು ಮೆಳೆಯ ಹತ್ತಿರ ಹೋದರು, ಉದ್ದನೆಯ ಬಿದಿರೊಂದನ್ನು ತೋರಿಸಿ “ಅದೇನು’ ಎಂದರು. ಜ್ಞಾನಾಕಾಂಕ್ಷಿ “ಬಿದಿರು’ ಎಂದ. ಗುರುಗಳು ಅದರ ಬುಡದಲ್ಲೇ ಇದ್ದ ಇನ್ನೊಂದು ಬಿದಿರನ್ನು ತೋರಿಸಿ “ಅದೇನು’ ಎಂದು ಕೇಳಿದರು. “ಇದು ಎಳೆಯ ಬಿದಿರು, ಇನ್ನೂ ಬೆಳೆಯಬೇಕಾದ ಬಿದಿರು’ ಎಂದ ಜ್ಞಾನಾಕಾಂಕ್ಷಿ.

“ಅವೆಲ್ಲವೂ ಬಿದಿರುಗಳು’ ಎಂದು ಹೇಳಿದವರೇ ಇಕು-ಚಿನ್‌ ಮರಳಿ ಆಶ್ರಮದತ್ತ ನಡಿಗೆ ಆರಂಭಿಸಿದರು. ನಮ್ಮ ಪರಿಸ್ಥಿತಿಯೂ ಆ ಜ್ಞಾನಾಕಾಂಕ್ಷಿಯಂತೆ. ಎಲ್ಲರೊಳಗೂ ಬುದ್ಧನಿದ್ದಾನೆ. ಅವನು ಬಲಿಯುವವರೆಗೆ ನಾವು ಕಾಯಬೇಕು ಅಷ್ಟೇ. ಎಲ್ಲರೊಳಗೂ ಪರಮಾತ್ಮ ಇದ್ದಾನೆ ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕು ಅಷ್ಟೇ. ಯಾವುದು ನಿಜವೋ ಅದನ್ನು ತಿಳಿಯಬೇಕಾದರೆ ಇಂದ್ರಿಯಗಳು ಗ್ರಹಿಸಿದ್ದನ್ನು ಸತ್ಯ ಎಂದು ನಂಬುವುದನ್ನು ಬಿಡಬೇಕು. ದೈನಿಕ ಚಟುವಟಿಕೆಗಳ ಮಟ್ಟಿಗೆ ಮಾತ್ರ ಅದರ ಅವಲಂಬನೆ ಸಾಕು. ನಾವು ಯಾರಿಗಿಂತಲೂ ಮೇಲಲ್ಲ, ಯಾರಿಗಿಂತಲೂ ಕೀಳಲ್ಲ; ನಾವು ನಾವೇ ಎಂಬ ಸತ್ಯವನ್ನು ಅರಿತುಕೊಂಡರೆ ಸದಾಚಾರಗಳ ಬೆಳಕಿನಲ್ಲಿ ಸಕ್ರಿಯವಾದ ಮತ್ತು ಸಕಾರಾತ್ಮಕವಾದ ಬದುಕನ್ನು ಬಾಳಲು ಸಾಧ್ಯವಾಗುತ್ತದೆ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next