ನವದೆಹಲಿ: ಐಐಟಿ ಮತ್ತು ಇತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ತಾಂತ್ರಿಕ ಶಿಕ್ಷಣ ಪಡೆಯಲು ಇರುವ ಜಾಯಿಂಟ್ ಎಂಟ್ರಾನ್ಸ್ ಎಕ್ಸಾಮಿನೇಷನ್ (ಜೆಇಇ)ನ ಪ್ರಧಾನ ಸುತ್ತಿನ ಪರೀಕ್ಷೆಯನ್ನು ಇನ್ನು ಮುಂದೆ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅನುಮತಿ ಕಲ್ಪಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರೀಯಾಲ್ ನಿಶಾಂಕ್ ಗುರುವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಸರ್ಕಾರ ಅಂಗೀಕರಿಸಿದ ಹೊಸ ಶಿಕ್ಷಣ ನೀತಿಯ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸ್ತುತ ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳಲ್ಲಿ ಪರೀಕ್ಷೆಗೆ ಅನುಮತಿಯಿದೆ. ಆದರೆ, 2021ರಿಂದ ಅನ್ವಯವಾಗುವಂತೆ ಜೆಇಇ ಪರೀಕ್ಷೆಗಳನ್ನು ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಸಚಿವ ನಿಶಾಂಕ್ ತಿಳಿಸಿದ್ದಾರೆ.
ಆದರೆ, ಯಾವ್ಯಾವ ಭಾಷೆಗಳು ಎಂಬ ಮಾಹಿತಿಯನ್ನು ನೀಡಿಲ್ಲ. ರಾಜ್ಯಗಳ ಮಟ್ಟದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಚಿವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸ್ವಚ್ಛ ಭಾರತ್: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ
ಪ್ರೋಗ್ರಾಮ್ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಅಸೆಸ್‌ಮೆಂಟ್ (ಪಿಐಎಸ್‌ಎ) ಪರೀಕ್ಷೆಯಲ್ಲಿ ಕೂಡ ಪ್ರಾದೇಶಿಕ ಭಾಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅದೇ ಮಾದರಿಯನ್ನು ಜೆಇಇ ಮೈನ್ ಪರೀಕ್ಷೆಯಲ್ಲಿ ಅಳವಡಿಸಿ ಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದಾರೆ.