ಚಂಡೀಗಢ: ಹರ್ಯಾಣ ರಾಜ್ಯವು ಆರೋಗ್ಯ ವೃತ್ತಿಪರರಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಹೊರಟಿದ್ದು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಇತರ ಸಿಬಂದಿಗಳಿಗೆ ಮೇಕಪ್, ಫಂಕಿ ಹೇರ್ ಸ್ಟೈಲ್, ಉದ್ದನೆಯ ಉಗುರುಗಳನ್ನು ಬಿಡುವುದು, ಟೀ ಶರ್ಟ್‌ಗಳು, ಡೆನಿಮ್‌ಗಳು ಮತ್ತು ಸ್ಕರ್ಟ್‌ಗಳನ್ನು ಬ್ಯಾನ್ ಮಾಡಲು ತೀರ್ಮಾನ ಕೈಗೊಂಡಿದೆ.
ರಾಜ್ಯ ಸರಕಾರ ಸಿದ್ಧಪಡಿಸುತ್ತಿರುವ ಡ್ರೆಸ್ ಕೋಡ್ ಅಂತಿಮ ಹಂತದಲ್ಲಿದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಶುಕ್ರವಾರ ಹೇಳಿದ್ದಾರೆ. ಕೆಲವು ರೀತಿಯ ಡ್ರೆಸ್‌ಗಳನ್ನು ನಿಷೇಧಿಸುವ ಕ್ರಮವು ವೈದ್ಯಕೀಯ ಸಿಬಂದಿಗಳಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಅಂಬಾಲಾದ ವೈದ್ಯರ ಸಮೂಹ ಡ್ರೆಸ್ ಕೋಡ್ ಅನ್ನು ಅಳವಡಿಸಿಕೊಳ್ಳುವುದು ಸಿಬಂದಿಗಳಿಗೆ ವೃತ್ತಿಪರ ದೃಷ್ಟಿಕೋನವನ್ನು ನೀಡುತ್ತದೆ, ಆದರೆ ದಾದಿಯರ ಸಂಘವು ಸರಕಾರವು ತನ್ನ ಅಭಿಪ್ರಾಯವನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ವಾರಾಂತ್ಯ, ಸಂಜೆ ಮತ್ತು ರಾತ್ರಿ ಪಾಳಿ ಸೇರಿದಂತೆ ಕರ್ತವ್ಯದಲ್ಲಿರುವ ಸಿಬಂದಿ ದಿನದ 24 ಗಂಟೆಯೂ ಡ್ರೆಸ್ ಕೋಡ್ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ ವಿಜ್, ತಪ್ಪಿತಸ್ಥ ನೌಕರರನ್ನು ದಿನಕ್ಕೆ ಗೈರುಹಾಜರೆಂದು ಗುರುತಿಸಲಾಗುವುದು ಎಂದು ಹೇಳಿದ್ದಾರೆ.
ಆಸ್ಪತ್ರೆಯು ತನ್ನ ಉದ್ಯೋಗಿಗಳು ಕೆಲವು ನಡವಳಿಕೆಯನ್ನು ಅನುಸರಿಸುವ ಅಗತ್ಯವಿದೆ. ಡ್ರೆಸ್ ಕೋಡ್ ಸಂಸ್ಥೆಗೆ ವೃತ್ತಿಪರ ಸ್ಪರ್ಶ ನೀಡುವ ಅತ್ಯಗತ್ಯ ಅಂಶವಾಗಿದೆ. ಕೆಲಸದ ಸಮಯದಲ್ಲಿ ವಿಶೇಷವಾಗಿ ಆರೋಗ್ಯ ಕೇಂದ್ರಗಳಲ್ಲಿ ಮೋಜಿನ ಕೇಶವಿನ್ಯಾಸ, ಭಾರವಾದ ಆಭರಣಗಳು, ಪರಿಕರಗಳು, ಮೇಕ್ಅಪ್, ಉದ್ದವಾದ ಉಗುರುಗಳು ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ನಾಯಕ, ಸಚಿವ ವಿಜ್ ಹೇಳಿದ್ದಾರೆ.
ಹಿಸಾರ್ ಹರಿಯಾಣದ ವಿವಿಧೋದ್ದೇಶ ಆರೋಗ್ಯ ನೌಕರರು ಸಹ ಪ್ರಕಟಣೆಯನ್ನು ಸ್ವಾಗತಿಸಿದ್ದಾರೆ. ಆದರೆ ಡ್ರೆಸ್ ಕೋಡ್ ಜಾರಿಗೊಳಿಸುವ ಮುನ್ನ ಸರಕಾರ ಸಂಘದ ಅಭಿಪ್ರಾಯ ಪಡೆಯಬೇಕಿತ್ತು ಎಂದು ನರ್ಸಿಂಗ್ ವೆಲ್ ಫೇರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ವಿನೀತಾ ಹೇಳಿದ್ದಾರೆ.
ಆಡಳಿತಾಧಿಕಾರಿಗಳಿಗೂ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದಿದ್ದಾರೆ.