Advertisement

ಬಿಜೆಪಿ ಅಸ್ತ್ರಕ್ಕೆ ಜೆಡಿಎಸ್‌ ತಟಸ್ಥ ನಿಲುವು?

06:20 AM Nov 13, 2017 | Team Udayavani |

ಸುವರ್ಣಸೌಧ(ಬೆಳಗಾವಿ): ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಮೊದಲ ದಿನ ವಿಧಾನಸಭೆಯ ಕಾರ್ಯಕಲಾಪ ಸಂತಾಪಕ್ಕೆ ಸೀಮಿತವಾದರೆ ವಿಧಾನಪರಿಷತ್‌ನಲ್ಲಿ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸುವ ಸಾಧ್ಯತೆಯಿದೆ. ಈ ವಿಚಾರ ವಿಧಾನಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದ ಉಂಟು ಮಾಡುವ ನಿರೀಕ್ಷೆಯಿದೆ.

Advertisement

ಸೋಮವಾರ ವಿಧಾನಸಭೆಯಲ್ಲಿ ಇತ್ತೀಚೆಗೆ ನಿಧನರಾದ ಹಾಲಿ ವಿಧಾನಸಭೆ ಸದಸ್ಯರಾಗಿದ್ದ ಖಮರುಲ್‌ ಇಸ್ಲಾಂ, ಚಿಕ್ಕಮಾದು, ಮಾಜಿ ಮುಖ್ಯಮಂತ್ರಿ ಎನ್‌. ಧರಂಸಿಂಗ್‌, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌, ಪತ್ರಕರ್ತರಾದ ಗೌರಿ ಲಂಕೇಶ್‌, ಖಾದ್ರಿ ಅಚ್ಯುತನ್‌, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಂಗಕರ್ಮಿ ಏಣಗಿ ಬಾಳಪ್ಪ ಮತ್ತಿತರರಿಗೆ ಸಂತಾಪ ಸೂಚಿಸಲಾಗುವುದು.

ಬಳಿಕ, ಸದನ ಮುಂದೂಡಿಕೆಯಾಗುವುದರಿಂದ ಮಂಗಳವಾರ ಜಾರ್ಜ್‌ ವಿಚಾರದಲ್ಲಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ, ಮಂಗಳವಾರದಿಂದ ಎರಡೂ ಸದನಗಳಲ್ಲಿ ಜಾರ್ಜ್‌ ರಾಜೀನಾಮೆ ವಿಚಾರ ಬಿಸಿಯೇರುವ ಸಾಧ್ಯತೆಯಿದೆ. ಆದರೆ, ಜೆಡಿಎಸ್‌ ಈ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸುವ ಸಾಧ್ಯತೆ ಇರುವುದರಿಂದ ಬಿಜೆಪಿ “ಅಸ್ತ್ರ ‘ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದೇ ವೇಳೆ, ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸದಿದ್ದರೆ ಜನರ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಆತಂಕವೂ ಬಿಜೆಪಿಗೆ ಇದೆ. ಹೀಗಾಗಿ, ಜಾರ್ಜ್‌ ವಿಚಾರದ ಜತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನಾಲ್ಕೂವರೆ ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷé ತೋರಿದೆ. ಕಬ್ಬು ಬೆಳೆಗಾರರ ಸಮಸ್ಯೆ ಈಡೇರಿಸಿಲ್ಲ. ಹೈದರಾಬಾದ್‌ ಕರ್ನಾಟಕ 
ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ ಎಂಬ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಬಿಜೆಪಿ ತೀರ್ಮಾನಿಸಿದೆ.

ಈ ಮಧ್ಯೆ, ಜೆಡಿಎಸ್‌ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿರುವ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಲು ನಿರ್ಧರಿಸಿದೆ. ಪರಿಷತ್‌ನಲ್ಲಿ ಮೊದಲ ದಿನವೇ ಈ ಕುರಿತು ಪ್ರಸ್ತಾಪ ಮಾಡುವ ಸಾಧ್ಯತೆಯೂ ಇದೆ. ವಿಧಾನಸಭೆಯಲ್ಲಿ ಮಂಗಳವಾರ ಜೆಡಿಎಸ್‌ ಈ ವಿಚಾರ ಕೈಗೆತ್ತಿಕೊಳ್ಳಲಿದೆ.

Advertisement

ಕಾಂಗ್ರೆಸ್‌ನಿಂದ ಪ್ರತಿತಂತ್ರ: ಆದರೆ, ಆಡಳಿತಾರೂಢ ಕಾಂಗ್ರೆಸ್‌ ಪ್ರತಿಪಕ್ಷ ಬಿಜೆಪಿಯನ್ನು ಮಣಿಸಲು ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ಜಾರ್ಜ್‌ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದರೆ ವಿದ್ಯುತ್‌ ಖರೀದಿ ಹಗರಣದ ಸದನ ಸಮಿತಿ ವರದಿ ಮಂಡಿಸಿ ಬಿಜೆಪಿ ಸರ್ಕಾರದಲ್ಲಿ ಅವ್ಯವಹಾರ ಆಗಿದೆ ಎಂಬುದನ್ನು ಬಿಂಬಿಸುವುದು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಅಕ್ರಮವಾಗಿ ಭೂ ಮಂಜೂರಾತಿ ಮಾಡಿದ್ದಾರೆಂಬ ಆರೋಪ, ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಮರು ತನಿಖೆ ನೀಡುವ ತೀರ್ಮಾನ ಕೈಗೊಂಡು ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿಹಾಕಲು ತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.

9 ದಿನ ಪ್ರಶ್ನೋತ್ತರ: ಹತ್ತು ದಿನಗಳ ಅಧಿವೇಶನದಲ್ಲಿ ಒಂಭತ್ತು ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ 14 ರಿಂದ 24ರವರೆಗೆ 9 ದಿನ ಪ್ರಶ್ನೋತ್ತರ ಕಲಾಪಕ್ಕೆ ಸಂಬಂಧಿಸಿದೆ. ಇದಕ್ಕಾಗಿ ನ.11ರವರೆಗೆ 1,661 ಪ್ರಶ್ನೆಗಳು, 20 ಗಮನ ಸೆಳೆಯುವ ಸೂಚನೆಗಳು ಮತ್ತು ನಿಯಮ 351ರಡಿ 33 ಸೂಚನೆಗಳು ಸ್ವೀಕೃತವಾಗಿವೆ.

ಹಿಂದಿನ ಅಧಿವೇಶನದ ನಾಲ್ಕು ವಿಧೇಯಕಗಳು ಬಾಕಿ ಇದ್ದು, ಈ ಅಧಿವೇಶನಕ್ಕೆ 5 ವಿಧೇಯಕಗಳು ಸ್ವೀಕೃತವಾಗಿವೆ. ಅಧಿವೇಶನದ ಅವಧಿಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲು ಸರ್ಕಾರದಿಂದ ಕೋರಿಕೆ ಬಂದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. 2017ರಲ್ಲಿ ಇಲ್ಲಿವರೆಗೆ ಒಟ್ಟು 30 ದಿನಗಳ ಕಾಲ ಅಧಿವೇಶನ ನಡೆದಿದೆ. ಬೆಳಗಾವಿಯಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿದ್ದು, ಒಟ್ಟಾರೆ ಪ್ರಸ್ತುತ ವರ್ಷದಲ್ಲಿ 40 ದಿನ ಅಧಿವೇಶನ ನಡೆಸಿದಂತಾಗುತ್ತದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಇದೇ ಸಂದರ್ಭದಲ್ಲಿ ತಿಳಿಸಿದರು.

ವಿದ್ಯುತ್‌ ಖರೀದಿ ಹಗರಣಕ್ಕೆ ಸಂಬಂಧಿಸಿದ ಸದನ ಸಮಿತಿಯ ವರದಿ ಈವರೆಗೆ ಬಂದಿಲ್ಲ. ಇದೇ ವೇಳೆ ಕೆರೆಗಳ ಒತ್ತುವರಿ ಸಂಬಂಧದ ಸದನ ಸಮಿತಿಯ ವರದಿ ಮುದ್ರಣಗೊಂಡಿದ್ದು, ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಅಲ್ಲದೇ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಸದನದ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನೂ ಸಹ ಇದೇ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
 
ಪತ್ರಕರ್ತರ ಮೇಲಿನ ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದ ಸದನ ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಲಾಗಿದ್ದು, ಸದನ ಅದನ್ನು ಒಪ್ಪಿಕೊಂಡಿದೆ. ಈಗ ಸದನವೇ ಆ ಬಗ್ಗೆ ತೀರ್ಮಾನಕ್ಕೆ ಬರಬೇಕಿದೆ. ಈ ಪ್ರಕರಣದಲ್ಲಿ ನಾನು ಸಂವಿಧಾನ, ಕಲಾಪದ ನಿಯಮಾವಳಿಗಳು ಮತ್ತು ಕೌಲ್‌ ಆ್ಯಂಡ್‌ ಸೆಕ್ಟರ್‌ ಮಾತ್ರ ನೋಡುತ್ತೇನೆ ಎಂದು ಹೇಳಿದರು.

ವಿಧಾನಸಭೆ
– ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ
– ಅಗಲಿದ ಗಣ್ಯರಿಗೆ ಸಂತಾಪ
– ಸಂತಾಪ ಸೂಚನೆ ಪಟ್ಟಿಯಲ್ಲಿ ವಿಧಾನಸಭೆಯ ಇಬ್ಬರು ಹಾಲಿ ಸದಸ್ಯರು ಇರುವುದರಿಂದ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಿಕೆ ವಿಧಾನಪರಿಷತ್‌
– ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ
– ಅಗಲಿದ ಗಣ್ಯರಿಗೆ ಸಂತಾಪ
– ಕೆಲಕಾಲ ಕಲಾಪ ಮುಂದೂಡಿಕೆ
– ಕಲಾಪ ಮತ್ತೆ ಪ್ರಾರಂಭ, ಪ್ರಶ್ನೋತ್ತರ, ಇತರೆ ಕಲಾಪಗಳು.

ಅಂಗೀಕಾರಕ್ಕೆ ಬಾಕಿ
ಇರುವ ವಿಧೇಯಕಗಳು

– ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ
 ನಿಯಂತ್ರಣ) ವಿಧೇಯಕ-2016 
– ಕರ್ನಾಟಕ ನಗರಾಭಿವೃದಿಟಛಿ ಪ್ರಾಧಿಕಾರಿಗಳ(ತಿದ್ದುಪಡಿ) ವಿಧೇಯಕ-2016
– ಅಂತರ್‌ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ (ತಿದ್ದುಪಡಿ) ವಿಧೇಯಕ-2017
–  ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017.

ಮಂಡನೆಗೆ ಬಾಕಿ
ಇರುವ ವಿಧೇಯಕಗಳು

– ಕರ್ನಾಟಕ ಅಮಾನವೀಯ ದುಷ್ಟಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ವಿಧೇಯಕ-2017
– ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳ(ತಿದ್ದುಪಡಿ) ವಿಧೇಯಕ-2017
– ಕರ್ನಾಟಕ ಕೆಲವು ನಿಯಮಗಳನ್ನು ನಿರಸನಗೊಳಿಸುವ ವಿಧೇಯಕ-2017
– ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ವಿಧೇಯಕ-2017
– ಕರ್ನಾಟಕ ಧನ ವಿನಿಯೋಗ (ಸಂಖ್ಯೆ-4)ವಿಧೇಯಕ-2017.

Advertisement

Udayavani is now on Telegram. Click here to join our channel and stay updated with the latest news.

Next