ಹುಣಸೂರು: ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ತಂದೆ ಜಿ.ಟಿ.ದೇವೇಗೌಡರು ಕ್ಷೇತ್ರ ತೊರೆದ 15 ವರ್ಷಗಳ ನಂತರದಲ್ಲಿ ಪುತ್ರ ಹರೀಶ್‌ಗೌಡ ಸಹ ಗೆಲುವು ಸಾಧಿಸಿರುವುದು ಕ್ಷೇತ್ರದ ವಿಶೇಷ.
ತೀವ್ರ ಪೈಪೋಟಿಯಿಂದ ಕೂಡಿದ್ದ ಹುಣಸೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಚ್.ಪಿ.ಮಂಜುನಾಥ್ ಹಾಗೂ ಜೆಡಿಎಸ್‌ನ ಹರೀಶ್‌ಗೌಡರ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ 2,412 ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡರು ಬಹಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟಿದ್ದರಾದರೂ ಆತ್ಮವಿಶ್ವಾಸ ಗೆಲುವು ತದುಕೊಟ್ಟಿದ್ದು, ಎಚ್. ವಿಶ್ವನಾಥರ ಉಪ ಚುನಾವಣೆ ಹೊರತಾಗಿ ಕಳೆದ 15 ವರ್ಷಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಿದೆ.
ಅತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್ ಸೋಲು: ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಹಾಗೂ ಶಾಸಕ ಎಚ್.ಪಿ.ಮಂಜುನಾಥರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿರುವ ಮತದಾರ 92,254 ಮತಗಳನ್ನು ನೀಡಿದ್ದು, ಕಾಂಗ್ರೆಸ್ ಪಕ್ಷ ದಿಂದ ಗುಳೇ ಹೋದ ಬಹುತೇಕ ಮುಖಂಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ವಿಫಲ ವಾದದ್ದು, ಪ್ರತಿಬಾರಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ ಕೊಂಡು ಬರುತ್ತಿದ್ದ ಅಲ್ಪ ಪ್ರಮಾಣದಲ್ಲಿ ಕುರುಬರು, ಸಣ್ಣಪುಟ್ಟ ಸಮುದಾಯ ಹಾಗೂ ಮುಸ್ಲಿಂ ಸಮುದಾಯ ಈ ಬಾರಿ ಕಾಂಗ್ರೆಸ್‌ಗೆ ಕೈಕೊಟ್ಟಿದ್ದು, ಅತಿಯಾದ ಆತ್ಮವಿಶ್ವಾಸ, ಸಂಘಟಿತ ಪ್ರಚಾರದ ಕೊರತೆ, ಕೊನೆಯ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟು, ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದರ ಪರಿಣಾಮ ಮಂಜುನಾಥರಿಗೆ ಸೋಲುಂಟಾಗಿದೆ ಎನ್ನಬಹುದು.
ಜೆಡಿಎಸ್ ಗೆಲುವಿಗೆ ಕೈ ಹಿಡಿದ ಸಹಕಾರ: ಇನ್ನು ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡರು ತಂದೆಯಂತೆ ಸಹಕಾರ ಕ್ಷೇತ್ರದ ಮೂಲಕ ಹಿಡಿತ ಸಾಧಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಪರೇಷನ್ ಮಾಡಿ ಹಲವಾರು ಮುಖಂಡರನ್ನು ಜೆಡಿಎಸ್‌ನತ್ತ ಸೆಳೆದು ಕೊಂಡಿದ್ದು, ಸಣ್ಣಪುಟ್ಟ ಸಮುದಾಯ ಗಳನ್ನು ವಿಶ್ವಾಸಕ್ಕೆ ಪಡೆದದ್ದು, ಇಷ್ಟರ ನಡುವೆಯೂ ತಂದೆಯ ನಾಮಬಲ, ಹೊಸ ಮುಖವೆಂಬ ಕಾರಣ, ಜನರಲ್ಲಿ ವಿಶ್ವಾಸ ಮೂಡಿಸಿದ್ದು ಗೆಲುವಿಗೆ ಸಹಕಾರಿಯಾಯಿತು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಗೆಲುವು ಸಾಧಿಸಿದ್ದಾರೆ.
-ಸಂಪತ್ ಕುಮಾರ್