Advertisement
ಶನಿವಾರ ಜಿಲ್ಲೆಯ ಆಲಮಟ್ಟಿಯ ಕೃಷ್ಣಾ ತೀರದಲ್ಲಿ ಜನತಾ ಜಲಧಾರೆ ಜನಜಾಗೃತಿ ಅಭಿಯಾನದ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣೆಯ ಕಡೆಗೆ ನಡಿಗೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಾಡಿದ್ದೇನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Related Articles
Advertisement
ಅದೇ ರೀತಿ ಭವಿಷ್ಯದಲ್ಲಿ ರಾಜ್ಯದ ಜನರ ಬದುಕು ಮಕ್ಕಳ ಭವಿಷ್ಯ ಸರಿಪಡಿಸಿಕೊಳ್ಳಲು ನಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನಾಡಿನ ಮತದಾರ ಪ್ರಭು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದಲ್ಲಿ ರಾಜ್ಯದ ಎಲ್ಲ ನದಿಗಳ ನೀರನ್ನು ಸದ್ಬಳಕೆ ಮಾಡುತ್ತೇವೆ. ಈ ಮಹತ್ವದ ಕಾರ್ಯಕ್ಕೆ ಎಷ್ಟು ಲಕ್ಷ ಕೋಟಿ ಖರ್ಚಾದರೂ ಐದು ವರ್ಷಗಳಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ. ಈ ವಿಷಯವಾಗಿ ಹನುಮಾನ್ ಜಯಂತಿ ದಿನ ಸಂಕಲ್ಪ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಮಾಜಿ ಸಚಿವ ಎಸ್. ಆರ್. ಪಾಟೀಲ ನಡೆಸಿರುವ ಟ್ರ್ಯಾಕ್ಟರ್ ರ್ಯಾಲಿಯ ಸಂಕಲ್ಪ ಯಾತ್ರೆ ವಿರುದ್ದ ಗುಡುಗಿದ ಕುಮಾರಸ್ವಾಮಿ, ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ರಾಜ್ಯದ ಜನತೆಗೆ ನೀಡಿದ್ದಾದರೂ ಏನನ್ನು, ಈ ವರೆಗೂ ರಾಜ್ಯದ ನೀರಾವರಿ ಬಗ್ಗೆ ನೈಜ ಕಾಳಜಿ ತೋರದೆ ಈಗೇಕೆ ನೆನಪಾಗಿದೆ.ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಅಧಿಕಾರಕ್ಕೆ ಬಂದ ಮೇಲೆ ಏನು ಕೊಡುಗೆ ಕೊಟ್ಟರು. ಈಗ ನವಿಲೆ, ಕೃಷ್ಣಾ ಮೇಲ್ದಂಡೆ, ಮಹಾದಾಯಿ ಅಂತ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಭ್ರಷ್ಟಾಚಾರ, ಹಗರಣಗಳ ಬಗ್ಗೆ ನನ್ನ ಬಳಿ ಬೇಕಾದಷ್ಟು ದಾಖಲೆಗಳಿವೆ. ಈಗ ನಾನು ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಿ ಅರ್ಥವಿಲ್ಲ. ಬದಲಾಗಿ ತುರ್ತಾಗಿ ನಾಡಿನ ಜನತೆ ಬದುಕು ಕಟ್ಟಿಕೊಡುವ ಕೆಲಸ ಆಗಬೇಕಿದೆ. ಇದು ನಮ್ಮ ಪಕ್ಷದ ನಿಲುವು ಎಂದರು. ಭ್ರಷ್ಟಾಚಾರ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತೇವೆಂದು ಹೇಳುತ್ತಲೇ ಭ್ರಷ್ಟಾಚಾರ ಏರಿಸಿಕೊಂಡೇ ಹೋಗಿದ್ದಾರೆ. ಯಾವ ಪಕ್ಷಗಳ ಸರ್ಕಾರಗಳು ಭ್ರಷ್ಟಾಚಾರ ನಿಲ್ಲಿಸುವ ವಿಷಯದಲ್ಲಿ ಪ್ರಮಾಣಿಕತೆ ತೋರಿದ್ದಾರೆ. ಪಾವಿತ್ರ್ಯತೆ ಯಾವ ಪಕ್ಷದಲ್ಲೂ ಇಲ್ಲ ಎಂದು ಕುಟುಕಿದರು.