Advertisement

ಟಿಕೆಟ್‌ ವಂಚಿತರ ಬೆನ್ನು ಬಿದ್ದ ಜೆಡಿಎಸ್‌

06:30 AM Apr 17, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆ ಜೆಡಿಎಸ್‌ ಎರಡನೇ ಹಂತದಲ್ಲಿ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದ್ದು, ಎರಡೂ ಪಕ್ಷಗಳಲ್ಲಿ ಟಿಕೆಟ್‌ ವಂಚಿತರಾಗಿರುವ ಆಕಾಂಕ್ಷಿಗಳ ಬೆನ್ನು ಬಿದ್ದಿದೆ. 

Advertisement

ಗೆಲ್ಲುವ ಅಭ್ಯರ್ಥಿಗಳ ಕೊರತೆ ಇರುವ ಕಡೆ ಈಗಾಗಲೇ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಮತ್ತು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿರುವ ಆಕಾಂಕ್ಷಿಗಳನ್ನು ಸಂಪರ್ಕಿಸಿದ್ದು, ಟಿಕೆಟ್‌ ನೀಡುವ ಭರವಸೆಯೊಂದಿಗೆ ಪಕ್ಷಕ್ಕೆ ಆಹ್ವಾನ ನೀಡಿದೆ.

ಈ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಅಧ್ಯಕ್ಷರಿಗೆ ವಹಿಸಲಾಗಿದ್ದು, ಅವರು ಅನ್ಯ ಪಕ್ಷಗಳಲ್ಲಿ ಟಿಕೆಟ್‌ ಸಿಗದೇ ಇರುವವರೊಂದಿಗೆ ಮಾತುಕತೆ ನಡೆಸುತ್ತಾರೆ. ಅಂಥವರು ಜೆಡಿಎಸ್‌ಗೆ ಬರಲು ಒಪ್ಪಿದರೆ ನಂತರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಪಕ್ಷ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಹೆಚ್ಚು ಮಂದಿಗೆ ಗಾಳ:
ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್‌ ಕಳೆದುಕೊಂಡಿರುವ ಅಸ್ತಿತ್ವವನ್ನು ಮರಳಿ ಪಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಆಕಾಂಕ್ಷಿಗಳ ಬಗ್ಗೆ ಹೆಚ್ಚು ಗಮನಹರಿಸಿದೆ. 

ಚಿಕ್ಕಪೇಟೆಯಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹೇಮಚಂದ್ರ ಸಾಗರ್‌ ಸೋಮವಾರ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮಂಗಳವಾರ ಜೆಡಿಎಸ್‌ ಸೇರುವ ಸಾಧ್ಯತೆ ಇದೆ. ಇನ್ನೊಂದೆಡೆ ಮತ್ತೂಬ್ಬ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌.ಆರ್‌.ರಮೇಶ್‌ ಜತೆಗೂ ಜೆಡಿಎಸ್‌ ಸಂಪರ್ಕದಲ್ಲಿದ್ದು, ಇಬ್ಬರ ಪೈಕಿ ಒಬ್ಬರಿಗೆ ಚಿಕ್ಕಪೇಟೆ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ನೀಡಲು ಮುಂದಾಗಿದೆ. ಇನ್ನೊಬ್ಬರಿಗೆ ಪಕ್ಕದ ಯಾವುದಾದರೂ ಕ್ಷೇತ್ರ ನೀಡುವ ಸಾಧ್ಯತೆ ಇದೆ.

Advertisement

ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ.ರಾಮಚಂದ್ರ ಜೆಡಿಎಸ್‌ ಸೇರುವುದು ಬಹುತೇಕ ಖಚಿತವಾಗಿದ್ದು, ಟಿಕೆಟ್‌ ಖಾತರಿ ನೀಡಲಾಗಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಜೆಡಿಎಸ್‌ ಜಿಲ್ಲಾಧ್ಯಕ್ಷ ಪ್ರಕಾಶ್‌ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಲಾಗಿದೆ. ಇನ್ನು ಶಾಂತಿನಗರದಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ನಿರಾಶರಾಗಿರುವ ಶ್ರೀಧರರೆಡ್ಡಿ ಜತೆಗೂ ಜೆಡಿಎಸ್‌ ಸಂಪರ್ಕದಲ್ಲಿದೆ.

ಅದೇರೀತಿ ಸಿ.ವಿ.ರಾಮನ್‌ನಗರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಿ.ರಮೇಶ್‌ ಈಗಾಗಲೇ ದೇವೇಗೌಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಟಿಕೆಟ್‌ ನೀಡುವುದಾದರೆ ಜೆಡಿಎಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪುಲಿಕೇಶಿನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಪ್ರಸನ್ನ ಕುಮಾರ್‌ ಕೂಡ ಜೆಡಿಎಸ್‌ ಸಂಪರ್ಕದಲ್ಲಿದ್ದಾರೆ. ಇಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿರುವ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರಿಂದ ಪ್ರಸನ್ನ ಕುಮಾರ್‌ ಜೆಡಿಎಸ್‌ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ. ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಸನ್ನ ಕುಮಾರ್‌ಗೆ ಜೆಡಿಎಸ್‌ ಕೋರಿದೆ. ಆದರೆ, ಬೆಂಗಳೂರಿನಲ್ಲೇ ಸ್ಪರ್ಧಿಸಲು ಅವರು ಆಸಕ್ತಿ ತೋರಿದ್ದು, ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರವಾಗಲಿದೆ.

ಉಳಿದಂತೆ ಬಿಜೆಪಿ ಟಿಕೆಟ್‌ ಸಿಗದೆ ತಿರುಗಿಬಿದ್ದಿರುವ ಬೈಲಹೊಂಗಲದ ಜಗದೀಶ್‌ ಮೆಟಗುಡ್ಡ, ಮೊಳಕಾಲ್ಮೂರಿನ ತಿಪ್ಪೇಸ್ವಾಮಿ, ಧಾರವಾಡದ ಸೀಮಾ ಮಸೂತಿ, ವಿಜಯಪುರದ ಅಪ್ಪು ಪಟ್ಟಣಶೆಟ್ಟಿ, ಮೊಳಕಾಲ್ಮೂರಿನ ತಿಪ್ಪೇಸ್ವಾಮಿ, ಮುದ್ದೇಬಿಹಾಳದ ಮಂಗಳಾದೇವಿ ಬಿರಾದಾರ, ಬಸವ ಕಲ್ಯಾಣದ ಎಂ.ಜಿ.ಮುಳೆ ಅವರನ್ನೂ ಜೆಡಿಎಸ್‌ ಸಂಪರ್ಕಿಸಿದ್ದು, ಮಂಗಳಾದೇವಿ ಬಿರಾದಾರ ಈಗಾಗಲೇ ಜೆಡಿಎಸ್‌ ಸೇರಿದ್ದಾರೆ.

ಅದೇ ರೀತಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ನಿರಾಶರಾಗಿರುವ ಹಾಲಿ ಶಾಸಕರಾದ ತಿಪಟೂರು ಷಡಕ್ಷರಿ, ತರೀಕೆರೆಯ ಶ್ರೀನಿವಾಸ್‌, ಮಾಯಕೊಂಡದ ಶಿವಮೂರ್ತಿ ನಾಯಕ್‌, ಬ್ಯಾಡಗಿಯ ಬಸವರಾಜ್‌ ಶಿವಣ್ಣವರ್‌, ವಿಜಯಪುರದ ಮಕೂºಲ್‌ ಭಗವಾನ್‌, ಜಗಳೂರಿನ ರಾಜೇಶ್‌, ಶಿರಗುಪ್ಪದ ನಾಗರಾಜ್‌, ಕೊಳ್ಳೆಗಾಲದ ಜಯಣ್ಣ, ಗುಲಬರ್ಗ ದಕ್ಷಿಣ ಕ್ಷೇತ್ರದ ಬಿ.ರಾಮಕೃಷ್ಣ ಅವರನ್ನೂ ಜೆಡಿಎಸ್‌ಗೆ ಸೆಳೆಯುವ ಪ್ರಯತ್ನ ಆರಂಭವಾಗಿದೆ.

ಇನ್ನೆರಡು ದಿನಗಳಲ್ಲಿ ಜೆಡಿಎಸ್‌ ಪಟ್ಟಿ
ಅನ್ಯ ಪಕ್ಷಗಳ ಅಸಮಾಧಾನಿತರಿಗೆ ಮಣೆ ಹಾಕುವ ಉದ್ದೇಶದಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿರುವ ಜೆಡಿಎಸ್‌, ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಿದೆ. ಎರಡನೇ ಪಟ್ಟಿಯೊಂದಿಗೆ ಮೊದಲ ಪಟ್ಟಿಯ ಕೆಲವು ಅಭ್ಯರ್ಥಿಗಳು ಬದಲಾಗಲಿದ್ದಾರೆ ಎಂದು ಹೇಳಲಾಗಿದೆ.

ವಿಕಾಸ ಪರ್ವ ಯಾತ್ರೆಯಲ್ಲಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದು, ಮಂಗಳವಾರ ಬೆಂಗಳೂರಿನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next