ಮೈಸೂರು: ರೈತ ಚಳವಳಿಯನ್ನು ಒಡೆಯಲು ಷಡ್ಯಂತ್ರ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರು ಕೆಲವರಿಗೆ ಸುಫಾರಿ ಕೊಟ್ಟಿರುವ ಸಂಶಯವಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಮೇಲೆ ಕಳೆದ ಆರು ತಿಂಗಳಿಂದ ನಿರಂತರವಾಗಿ ಚಳವಳಿಯನ್ನು ಒಡೆಯುವ ಕೆಲಸವಾಗುತ್ತಿದೆ. ಜೆಡಿಎಸ್ ಪ್ರಬಲವಾಗಿರುವ ಜಿಲ್ಲೆಗಳಲ್ಲೇ ರೈತಸಂಘ ಕೂಡ ರಾಜಕೀಯವಾಗಿ ಎದಿರೇಟು ಕೊಡುತ್ತಿರುವುದರಿಂದ ಕೆಲ ರೈತಸಂಘಟನೆಗಳನ್ನು ಬಳಸಿಕೊಂಡು ಗೊಂದಲ ಸೃಷ್ಟಿಸಲು ಸುಫಾರಿ ಕೊಡಲಾಗಿದೆ. ಆ ಸುಪಾರಿಗೆ ಪಚ್ಚೆ ನಂಜುಂಡಸ್ವಾಮಿ ಕೂಡ ಒಳಗಾಗಿರಬಹುದು ಎಂದು ತಿರುಗೇಟು ನೀಡಿದರು.
ಹುಚ್ಚಾಟ: ರೈತಸಂಘದ ಪದಾಧಿಕಾರಿಯೇ ಅಲ್ಲದ ಪಚ್ಚೆ ನಂಜುಂಡಸ್ವಾಮಿ ಮತ್ತು ಲಕ್ಷ್ಮೀನಾರಾಯಣ ಗೌಡ ಅವರಿಗೆ ನನ್ನನ್ನು ಉಚ್ಚಾಟನೆ ಮಾಡಲು ಅಧಿಕಾರ ಕೊಟ್ಟವರ್ಯಾರು? ಪಚ್ಚೆ, ಎಂ.ಡಿ.ನಂಜುಂಡಸ್ವಾಮಿ ಅವರ ಮಗ ಅಷ್ಟೆ, ರೈತ ಸಂಘದ ಮುಖಂಡನಲ್ಲ. ಲಕ್ಷ್ಮೀನಾರಾಯಣಗೌಡರನ್ನು ಪ್ರೊ.ನಂಜುಂಡಸ್ವಾಮಿ ಅವರೇ ಸಂಘದಿಂದ ಉಚ್ಚಾಟನೆ ಮಾಡಿದ್ದು, ಹೀಗಾಗಿ ರೈತಸಂಘಕ್ಕೆ ಸಂಬಂಧವೇ ಇಲ್ಲದ ಅವರು ಹೇಳುತ್ತಿರುವುದು ಉಚ್ಚಾಟನೆಯಲ್ಲ, ಹುಚ್ಚಾಟ ಎಂದು ಲೇವಡಿ ಮಾಡಿದರು.
ಸರ್ವಾನುಮತದ ಆಯ್ಕೆ: ಅಧ್ಯಕ್ಷ ಸ್ಥಾನಕ್ಕೆ ನಾನು ಆಸೆ ಪಟ್ಟವನಲ್ಲ. ಸ್ವಯಂಘೋಷಿತ ಅಧ್ಯಕ್ಷನಾಗಬೇಕಾದ ಅನಿವಾರ್ಯತೆಯೂ ನನಗಿಲ್ಲ. ರಾಜ್ಯಾಧ್ಯಕ್ಷರಾಗಿದ್ದ ಕೆ.ಟಿ. ಗಂಗಾಧರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಉಳಿದ ಏಳು ತಿಂಗಳ ಅವಧಿಗೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ 37 ಜನ ಪದಾಧಿಕಾರಿಗಳ ಪೈಕಿ ಸಭೆಯಲ್ಲಿ ಹಾಜರಿದ್ದ 33ಜನರು ತಮ್ಮನ್ನು ಸರ್ವಾನುಮತದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದರು.
ಜನವರಿ 5ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಗೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪತ್ರ ಕಳುಹಿಸಿದ್ದರು. ಅದರಂತೆ ಸಭೆಯಲ್ಲಿ ಹಾಜರಿದ್ದ 33 ಜನ ಪದಾಧಿಕಾರಿಗಳು ಹೊಸ ಅಧ್ಯಕ್ಷರ ಆಯ್ಕೆಗೆ ಒಪ್ಪಿದರಾದರೂ ತಾವೇ ಗಂಗಾಧರ್ ಅವರ ಉಪಸ್ಥಿತಿಯಲ್ಲೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡೋಣ ಎಂದು ಸಲಹೆ ನೀಡಿ, ಗಂಗಾಧರ್ ಅವರು ಸೂಚಿಸಿದಂತೆಯೇ ಫೆ.5ರಂದು ಚಿತ್ರದುರ್ಗದಲ್ಲಿ ಕರೆಯಲಾದ ರಾಜ್ಯ ಪದಾಧಿಕಾರಿಗಳ ಸಭೆಗೂ ಕೆ.ಟಿ.ಗಂಗಾಧರ್ ಗೈರಾದರು, ಚುಕ್ಕಿ ನಂಜುಂಡಸ್ವಾಮಿ ಸಭೆ ಮುಗಿದ ನಂತರ ಬಂದರು ಎಂದು ತಿಳಿಸಿದರು.
ಆಸ್ತಿ ತನಿಖೆ ಮಾಡಲಿ: ವಕೀಲ ವೃತ್ತಿ ಮಾಡುತ್ತಾ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರಗಳಿಂದ ಪ್ರೇರಿತನಾಗಿ ರೈತಸಂಘಕ್ಕೆ ಬಂದವನು ನಾನು. ರೈತಸಂಘದಲ್ಲಿನ 37 ವರ್ಷದ ನನ್ನ ಹೋರಾಟದಲ್ಲಿ ಜೀವನ ಮಾಡಲು ಸಂಘವನ್ನು ಬಳಸಿಕೊಂಡಿಲ್ಲ. ರಿಯಲ್ ಎಸ್ಟೇಟ್ ನನಗೆ ಗೊತ್ತಿಲ್ಲ. ಜಮೀನ್ದಾರಿ, ಸ್ಥಿತಿವಂತ ಕುಟುಂಬದಿಂದ ಬಂದವನು ನಾನು. ನನ್ನ ಮತ್ತು ಕುಟುಂಬದ ಆಸ್ತಿ, ಆರ್ಥಿಕ ಮೂಲದ ಪ್ರಮಾಣಪತ್ರ ಮಾಡಿಸಿ ರಾಜ್ಯ ಪದಾಧಿಕಾರಿಗಳ ಮುಂದೆ ಇಡುತ್ತೇನೆ. ಅಕ್ರಮ ಹಣ ಇದ್ದರೆ ಯಾರು ಬೇಕಾದರೂ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.
ರೈತಸಂಘದ ವರಿಷ್ಠರಾದ ಅಶ್ವತ್ಥನಾರಾಯಣ ರಾಜೇ ಅರಸ್, ಲೋಕೇಶ್ ರಾಜೇ ಅರಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮುಖಂಡರಾದ ನೇತ್ರಾವತಿ, ಮರಂಕಯ್ಯ, ಮಂಡಕಳ್ಳಿ ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.