Advertisement

ಹಿರಿಯರಿಗೆ ಉಚಿತ ಪ್ರಯಾಣ, ಆರೋಗ್ಯ

06:10 AM Jan 04, 2018 | Team Udayavani |

ಬೆಂಗಳೂರು:ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆರೋಗ್ಯ ಸೇವೆಗೆ ಉಚಿತ ಹೆಲ್ತ್‌ ಕಾರ್ಡ್‌ ಯೋಜನೆ ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

Advertisement

ಜೆಡಿಎಸ್‌ ನಗರ ಘಟಕ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ನಾಗರಿಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿರಿಯ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬುದು ನನ್ನ ಕನಸು. ಆ ನಿಟ್ಟಿನಲ್ಲಿ  70 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾಸಿಕ 5 ಸಾವಿರ ರೂ. ಮಾಶಾಸನ ಸೇರಿ ಹಲವಾರು ಯೋಜನೆಗಳ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ಕಸರತ್ತು ನಡೆಸಿದಿದ್ದರೂ ಮುಂದಿನ ಚುನಾವಣೆಯಲ್ಲಿ 50 ಸೀಟು ಗೆಲ್ಲುತ್ತೇನೆ. ಆದರೆ, ನನ್ನ ಕನಸು 113 ಸೀಟು ಗೆಲ್ಲುವುದು. 50 ಸೀಟು ಗೆದ್ದು ಬಿಜೆಪಿ ಅಥವಾ ಕಾಂಗ್ರೆಸ್‌ ಜತೆ ಸರ್ಕಾರ ನಡೆಸುವುದು ನನಗೆ ಬೇಕಿಲ್ಲ. ಮತ್ತೂಬ್ಬರ ಹಂಗಿನಲ್ಲಿದ್ದರೆ ನಾನು ಅಂದುಕೊಂಡ ಯೋಜನೆ ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಐಎಎಸ್‌ ಅಧಿಕಾರಿಗಳ ಮಾತು ಕೇಳಿ ಸರ್ಕಾರ ನಡೆಸಲು ಆಗುವುದಿಲ್ಲ. ಯಾಕೆಂದರೆ ಎಷ್ಟೋ ಐಎಎಸ್‌ ಅಧಿಕಾರಿಗಳು ತಮ್ಮ ತಂದೆ-ತಾಯಿಯರನ್ನೇ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರಿಗೆ ಬೇರೆಯವರ  ತಂದೆ-ತಾಯಂದಿರ ಬಗ್ಗೆ ಎಷ್ಟು ಮಾತ್ರ ಕಾಳಜಿ ಇರಲು ಸಾಧ್ಯ. ನಿಮ್ಮ ಸಲಹೆ-ಸೂಚನೆ ಪಡೆದು ಯೋಜನೆ ರೂಪಿಸಿದರೆ ಅದು ನಿಜವಾಗಿಯೂ ಅರ್ಹರಿಗೆ ತಲುಪುತ್ತದೆ. ಹೀಗಾಗಿ, ಜೆಡಿಎಸ್‌ ಪ್ರಣಾಳಿಕೆಯಲ್ಲಿ ಹಿರಿಯ ನಾಗರಿಕರಿಗೆ ಯಾವ ಯೋಜನೆ ಬೇಕು ಎಂಬುದು ನಿಮ್ಮ ಸಲಹೆ ಪಡೆದೇ ಸೇರಿಸುತ್ತೇನೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾದರೆ ನೀವು ಅಂಗಿ ಹಿಡಿದು ಕೇಳಬಹುದು. ಆ ಮಟ್ಟದ ಸ್ವಾತಂತ್ರ್ಯ ನಿಮಗೆ ಇರುತ್ತದೆ. ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿದ್ದು ನೋಡಿದ್ದೀರಿ, ಪ್ರಾದೇಶಿಕ ಪಕ್ಷಕ್ಕೆ ಒಮ್ಮೆ ಅವಕಾಶ ಕೊಡಿ. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆಗೆ  ಆರ್ಶೀವಾದ ಮಾಡಿ, ನಾನು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ವಿಫ‌ಲನಾದರೆ ಮತ್ತೆಂದೂ ನಿಮ್ಮ ಮುಂದೆ ಬರುವುದಿಲ್ಲ ಎಂದು ತಿಳಿಸಿದರು.

Advertisement

ಕೇಂದ್ರ ಸರ್ಕಾರವು ಹಿರಿಯ ನಾಗರಿಕರು ಸೇರಿ ನಿವೃತ್ತ ನೌಕರರು ಬ್ಯಾಂಕ್‌ಗಳಲ್ಲಿ ಭವಿಷ್ಯಕ್ಕಾಗಿ ಇಟ್ಟಿರುವ ಠೇವಣಿ ಹಣವನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ತರಲು ಹೊರಟಿದೆ. ಇದು  ಎಲ್ಲಿಗೆ ಮುಟ್ಟುತ್ತೋ ಗೊತ್ತಿಲ್ಲ.  ಉದ್ಯಮಿಗಳ ಬಹುಕೋಟಿ ರೂ. ಮನ್ನಾ ಮಾಡುತ್ತಿರುವ ಬ್ಯಾಂಕುಗಳು ಬಡವರ ಹಣದ ಮೇಲೆ ಕಣ್ಣಾಕಿರುವುದು ಅಪಾಯ ಹಾಗೂ ಆತಂಕಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ಜಾಹೀರಾತಿಗಾಗಿ 10 ಸಾವಿರ ಕೋಟಿ ರೂ.ವರೆಗೆ ವೆಚ್ಚ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಆ ಹಣ ಬಡವರ ಕಲ್ಯಾಣಕ್ಕಾಗಿ ಬಳಕೆ ಮಾಡಬಹುದಿತ್ತು ಎಂದು ಹೇಳಿದರು.

ಸಲಹೆಗಳ ಮಹಾಪೂರ
ಸಂವಾದದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ಸವಲತ್ತು ಪಡೆಯುವಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಅವಲತ್ತುಕೊಂಡರು. ಜತೆಗೆ , ಸಲಹೆಗಳ ಮಹಾಪೂರವನ್ನೇ ಹರಿಸಿದರು.

ಡಾ.ಪ್ರಾಣೇಶ್‌ರಾವ್‌, ನಿವೃತ್ತ ನ್ಯಾಯಮೂರ್ತಿ ಬ್ರಹ್ಮದೇವ್‌, ಪರಿಸರ ವಾದಿ ರಾಮಚಂದ್ರರಾವ್‌, ಅಶ್ವಥ್‌ನಾರಾಯಣ್‌, ವಿನುತಾ ಮಾಲಾ ಸೇರಿದಂತೆ ಹಲವಾರು ಹಿರಿಯರು ಮಾತನಾಡಿ, ಹಿರಿಯ ನಾಗರಿಕರು ಆರೋಗ್ಯ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹಾಗೂ ಭದ್ರತೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳಿಂದಲೇ ಮನೆಯಿಂದ ಹೊರಗೆ ಹಾಕಿಸಿಕೊಂಡು ಕಷ್ಟದಲ್ಲಿದ್ದಾರೆ. ಅವರಿಗೆ ಕೊನೆ ಗಾಲದಲ್ಲಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬೆಂಗಳೂರು ಸೇರಿ ರಾಜ್ಯದಲ್ಲಿ ಕನ್ನಡಿಗರಿಗೆ  ಉದ್ಯೋಗ ಸಿಗುತ್ತಿಲ್ಲ. ಹೊರಗಿನಿಂದ ವಲಸೆ ಬಂದವರೇ ಎಲ್ಲ ಕಡೆ ತುಂಬಿದ್ದಾರೆ. ಈ ಬಗ್ಗೆಯೂ ಗಮನಹರಿಸಿ ಎಂದು ಸಲಹೆ ನೀಡಿದರು.

ಶಾಸಕರಾದ  ಎಂ.ಪಿ.ಕುಮಾರಸ್ವಾಮಿ, ಗೋಪಾಲಯ್ಯ, ನಗರ ಜೆಡಿಎಸ್‌ ಘಟಕ ಅಧ್ಯಕ್ಷ ಪ್ರಕಾಶ್‌ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಕಣ್ಣೀರು
ಸಂವಾದದಲ್ಲಿ ಗಿರಿಗೌಡ ಎಂಬ ನಿವೃತ್ತ ಅಧಿಕಾರಿಯು ತಮ್ಮ ಹಾಗೂ ದೇವೇಗೌಡರ ಒಡನಾಟ ಸ್ಮರಿಸಿಕೊಂಡರು. ಒಮ್ಮೆ ದೇವೇಗೌಡರ ಮನೆ ಬಳಿ ಹೋದಾಗ 11 ವರ್ಷದ ಹುಡುಗನಾಗಿದ್ದ ಕುಮಾರಸ್ವಾಮಿ ಗೇಟು ಬಳಿ ನಿಂತಿದ್ದರು. ಆಗ ಗೌಡರು ನೋಡು ಗಿರಿಗೌಡ  ಈ ಹುಡುಗ ಓದುವುದೇ ಇಲ್ಲ, ಮನೆ ಮುಂದೆ ಗೇಟು ಬಳಿ  ಆಟವಾಡುತ್ತಾ ಇರುತ್ತಾನೆ ಎಂದು ಹೇಳಿದರು. ಇಂತಹ ಹುಡುಗರೇ ಮುಂದೆ ಏನೋ ಆಗುತ್ತಾರೆ ಸುಮ್ಮನಿರಿ ಎಂದು ಆಗ ನಾನು ಹೇಳಿದ್ದೆ, ಅದೇ ರೀತಿ ಕುಮಾರಸ್ವಾಮಿ ನಾಡಿನ ಮುಖ್ಯಮಂತ್ರಿಯೂ ಆದರು ಎಂದರು. ಆಗ, ಕುಮಾರಸ್ವಾಮಿ ಕಣ್ಣಲಿ ನೀರು ತುಂಬಿಕೊಂಡಿತು.

ರಾಜಕೀಯ ಬೇಡ
ಸಂವಾದಲ್ಲಿ ಪಾಲ್ಗೊಂಡಿದ್ದ ಹಿರಿಯರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ನಿಂದ ಬೆಳೆದು ಇದೀಗ ದೇವೇಗೌಡ, ಕುಮಾರಸ್ವಾಮಿಯವರ ಬಗ್ಗೆಯೇ ಲಘುವಾಗಿ ಮಾತನಾಡುತ್ತಿದ್ದಾರೆ ಎಂದಾಗ, ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ಇಲ್ಲಿ ರಾಜಕೀಯ ಮಾತನಾಡುವುದು ಬೇಡ. ಯಾವ ರಾಜಕೀಯ ನಾಯಕರ ವಿರುದ್ಧವೂ ದೂರು ಬೇಡ, ನಿಮಗೆ ಅನುಕೂಲ ಕಲ್ಪಿಸಲು ಏನು ಮಾಡಬಹುದು ಸಲಹೆ ನೀಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next