Advertisement

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

10:24 AM Oct 19, 2021 | Team Udayavani |

ಬೆಂಗಳೂರು: ಸ್ವಯಂ ಘೋಷಿತ ಸೇವಾ ಸಂಸ್ಥೆ ಅರ್ ಎಸ್ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವ್ನನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಜೆಡಿಎಸ್, ಸಮಾಜದ ಉದ್ಧಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ. ಹೇಳುವುದು ಆಚಾರ, ಮಾಡುವುದು ಅನಾಚಾರ. ಜನರಿಗೆ ಗೊತ್ತಿದೆ ನಿಮ್ಮ ಸದಾನಂದ ಪರಿವಾರ. ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು? ಅವರ ಹಿಂದೆಯೇ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು ಎಂದು ಟೀಕೆ ಮಾಡಿದೆ.

ಸಂಘ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು? ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು? ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ? ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ:ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಕುಮಾರಸ್ವಾಮಿ ಅವರು ಆರ್ ಎಸ್ಎಸ್ ತರಬೇತಿ ನೀಡಿದ ಅಧಿಕಾರಿಗಳ ಬಗ್ಗೆ ಹೇಳಿದ್ದರೆ, ನೀವು ಯುಪಿಎಸ್ ಸಿ ಗೆ ಸಮೀಕರಣ ಮಾಡಿ ಕೆಪಿಎಸ್ ಸಿ ಬಗ್ಗೆ ಎಗ್ಗಿಲ್ಲದೆ ಸುಳ್ಳು ಹೇಳುತ್ತಿದ್ದೀರಿ. ಸಾಂವಿಧಾನಿಕ ಸಂಸ್ಥೆಗಳನ್ನು ಗುಲಾಮರಂತೆ ಮಾಡಿಕೊಂಡಿರುವ ನಿಮಗೆ ಕೆಪಿಎಸ್ ಸಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಕುಮಾರಸ್ವಾಮಿ ಅವರೆಂದೂ ಕೆಪಿಎಸ್ ಸಿಯನ್ನು ದುರುಪಯೋಗ ಮಾಡಿಕೊಂಡಿಲ್ಲ. 2011ರಲ್ಲಿ ಪಾಸಾಗಿ ಅನ್ಯಾಯಕ್ಕೆ ಒಳಗಾದ ಹಳ್ಳಿ ರೈತರ ಮಕ್ಕಳ ಪರ ಹೋರಾಟ ನಡೆಸಿದ್ದಾರೆ. ನಿಮ್ಮ ಹಾಗೆ ಗರ್ಭಗುಡಿ ಸಂಸ್ಕೃತಿ ಅವರದಲ್ಲ. ಮನೆ ಬಾಗಿಲಿಗೆ ಬಂದು ಸಹಾಯ ಕೇಳುವ ಯಾರನ್ನೂ ಸೊಕ್ಕಿನಿಂದ ಆಚೆಗಟ್ಟಿದವರಲ್ಲ. ನಿಮಗೆ ಆ ಮಾನವೀಯತೆ ಹೇಗೆ ಗೊತ್ತಾಗಬೇಕು. ಕೆಪಿಎಸ್ ಸಿಯನ್ನು ಹಾಳು ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು. ಬಿಡಿಎಯಲ್ಲಿ ತಿಂದು ತೇಗಿದವರನ್ನು ಕೆಪಿಎಸ್ ಸಿ ಗೆ ತಂದು ಕೂರಿಸಿದ್ದು ಯಾರೆಂಬುದು ಗೊತ್ತಿಲ್ಲವೆ? ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ಬಿಜೆಪಿ ವರಸೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next