ಹೊಸದಿಲ್ಲಿ: ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಬೆಂಗಳೂರು-ಮೈಸೂರು ಉದ್ದೇಶಿತ ಪಾದಯಾತ್ರೆಯಿಂದ ಜೆಡಿಎಸ್ ಹೊರಗುಳಿಯಲಿದೆ ಎಂದು ಬುಧವಾರ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿನ ಜೆಡಿಎಸ್ ನಾಯಕ ” ಪಾದಯಾತ್ರೆಯ ವಿಚಾರದಲ್ಲಿ ನಮ್ಮ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಮತ್ತು ಪ್ರತಿಭಟನೆಯ ನೇತೃತ್ವ ವಹಿಸುವ ಜವಾಬ್ದಾರಿಯನ್ನು ನೀಡಿದವರಲ್ಲಿ ಹಾಸನ ಜಿಲ್ಲೆಯ ನಾಯಕನನ್ನು(ಪ್ರೀತಂ ಗೌಡ) ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದರು ಮಾತ್ರವಲ್ಲದೆ ಪಾದಯಾತ್ರೆಗೆ ನೈತಿಕ ಬೆಂಬಲವನ್ನು ನೀಡುವುದನ್ನೂ ತಳ್ಳಿಹಾಕಿದರು.
ಭಾರೀ ಮಳೆಯಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅನೇಕರು ನಿರಾಶ್ರಿತರಾಗುತ್ತಿದ್ದಾರೆ ಮತ್ತು ನೂರಾರು ಹಳ್ಳಿಗಳು ಮುಳುಗಿರುವಾಗ ಪಾದಯಾತ್ರೆ ನಡೆಸಲು ಸೂಕ್ತ ಸಮಯ ಅಲ್ಲ. ಹಾಗಾಗಿ ನಾವು ಹಿಂದೆ ಸರಿದಿದ್ದೇವೆ.ಈಗ ನಾವು ಜನರ ನೋವಿಗೆ ಸ್ಪಂದಿಸಬೇಕು.ಈ ಸಂದರ್ಭಗಳಲ್ಲಿ ಪಾದಯಾತ್ರೆಯನ್ನು ಯಾರು ಮೆಚ್ಚುತ್ತಾರೆಂದು ನನಗೆ ತಿಳಿದಿಲ್ಲ. ಪ್ರತಿಭಟನೆಯ ನೇತೃತ್ವ ವಹಿಸಲು ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಆಯ್ಕೆ ಮಾಡಿದ ಬಿಜೆಪಿಯ ಕ್ರಮದಿಂದ ನೋವಾಗಿದೆ ಎಂದರು.
“ಯಾರು ಆ ಪ್ರೀತಂ ಗೌಡ? ದೇವೇಗೌಡರ ಕುಟುಂಬವನ್ನು ಮುಗಿಸಲು ಪ್ರೀತಂ ಗೌಡ ಮುಂದಾಗಿದ್ದಾರೆ. ಬಿಜೆಪಿ ಸಭೆ ಕರೆದು ಪ್ರತಿಭಟನಾ ತಯಾರಿ ಕುರಿತು ಚರ್ಚಿಸಲು ಪ್ರೀತಮ್ ಗೌಡ ಅವರ ಪಕ್ಕದಲ್ಲಿ ಕುಳಿತುಕೊಳ್ಳಲು ನನ್ನನ್ನು ಕೇಳುತ್ತಾರೆ.ನನ್ನ ಕುಟುಂಬಕ್ಕೆ ವಿಷ ಹಾಕಿದ ವ್ಯಕ್ತಿ. ಪೆನ್-ಡ್ರೈವ್ ವಿತರಣೆಯ ಹೊಣೆಗಾರ ಯಾರು? ಅವರು ಇದಕ್ಕೆ ಬೆಂಬಲವನ್ನು ಕೇಳುತ್ತಿದ್ದಾರೆಯೇ? ಹಾಸನದಲ್ಲಿ ಏನಾಯಿತು ಎಂದು ಅವರಿಗೆ ತಿಳಿದಿಲ್ಲವೇ? ಅದಕ್ಕೆಲ್ಲ ಯಾರು ಹೊಣೆ? ನನ್ನ ಸಹನೆಗೂ ಒಂದು ಮಿತಿ ಇದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರ ಹೆಸರು ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅಗಸ್ಟ್ 3 ರಿಂದ ಪ್ರತಿಭಟನಾ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಿದ್ದವು.