ಬೆಳಗಾವಿ: ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕೃತಿ ದಹಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಬಂದ
ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಿದರು.
ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ದಿನದಿನಕ್ಕೂ ಏರುತ್ತಿದೆ. ಜನ ಸಾಮಾನ್ಯರು ತೀವ್ರ ನೊಂದಿದ್ದಾರೆ. ಇಂಧನ ದರ ಹೆಚ್ಚಳದಿಂದ ಜನಸಾಮಾನ್ಯರು ವಾಹನ ಇಟ್ಟುಕೊಳ್ಳುವುದು ಕಷ್ಟಕರವಾಗಿದೆ. ಕೂಡಲೇ ಇಂಧನ ಬೆಲೆ ನಿಯಂತ್ರಿಸಬೇಕು. ಜತೆಗೆ ಚುನಾವಣೆ ಬಳಿಕ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಮಿತ್ ಶಾ ಭರವಸೆ ನೀಡಿದರು. ಇನ್ನೂವರೆಗೆ ಈ ಸಮಸ್ಯೆ ಇತ್ಯರ್ಥಗೊಂಡಿಲ್ಲ ಎಂದು ದೂರಿದರು.
ವಿದೇಶದಲ್ಲಿರುವ ಕಪ್ಪು ಹಣ ಮರಳಿ ತರಬೇಕು. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿರುವ ಕಬ್ಬಿಗೆ ಒಂದು ಕ್ವಿಂಟಾಲ್‌ಗೆ 3500 ರೂ. ಕನಿಷ್ಠ ಬೆಲೆ ನಿಗದಿ ಮಾಡಬೇಕು. ಕಬ್ಬು ಬೆಳೆಗಾರರ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಫೈಜುಲ್ಲಾ ಮಾಡಿವಾಲೆ, ಚನ್ನಪ್ಪ ವಗ್ಗನ್ನವರ, ಮೇಘಾ ಕುಂದರಗಿ, ಮಹಾದೇವ ನಡುವಿನಮನಿ, ಶಾರದಾ ಢವಳಿ, ಸಂತೋಷ ಉಪಾಧ್ಯಾಯ ಸೇರಿದಂತೆ ಇತರರು ಇದ್ದರು.