Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗಾರಾಜ್ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಜಿಲ್ಲೆಯ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿತ್ತು. ಈ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ರಾಜ್ಯದ ಬಿಜೆಪಿ ಸರ್ಕಾರವು ಕಾಮಗಾರಿಗಳಿಗೆ ಅನುದಾನವನ್ನು ತಡೆಹಿಡಿದೆ ಎಂದು ಆಪಾದಿಸಿದರು.
Related Articles
Advertisement
ಆದರೆ ಈಗ ಈ ಯೋಜನೆಯನ್ನು ಮಾರ್ಪಡಿಸಿ ಚನ್ನಪಟ್ಟಣ ಕೆರೆಗೆ 35 ಕೋಟಿ ರೂ. ಮಾತ್ರ ಬಳಸಿಕೊಂಡು ಉಳಿದ ಮೊತ್ತವನ್ನು ಹಾಸನ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಬಳಸಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣಕೆರೆ ಅಭಿವೃದ್ಧಿಯ 144 ಕೋಟಿ ರೂ. ಯೋಜನೆಯನ್ನು ಮಾರ್ಪಡಿಸದೇ ಈಗಾಗಲೇ ರೂಪಿಸಿರುವ ಕ್ರಿಯಾ ಯೋಜನೆಯಂತೆ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಶಾಸಕರು ಆಗ್ರಹಿಸಿದರು.
ಎಂಜಿನಿಯರಿಂಗ್ ಕಾಲೇಜು ಮುಂದುವರಿಸಿ: ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ಪ್ರಾರಂಭವಾಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಂಯೋಜನೆಯನ್ನು ರದ್ದುಪಡಿಸುವ ಪ್ರಯತ್ನವನ್ನು ಉನ್ನತ ಶಿಕ್ಷಣ ಇಲಾಖೆ ಮಾಡುತ್ತಿದೆ. ಕಾಲೇಜು ಮುಂದುವರಿಯಲು ಅಡ್ಡಿಪಡಿಸಬಾರದು ಹಾಗೂ ಕಾಲೇಜಿನ ಮೂಲಸೌಕರ್ಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಮೊಸಳೆ ಹೊಸಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್‌ನ ಎರಡನೇ ಹಂತದ ಕಾಮಗಾರಿಗೆ 11.80 ಕೋಟಿ ರೂ.,
ಹೊಳೆನರಸೀಪುರದ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್‌ನ 3 ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 3.80 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಹಾಸನದ ಗಂಧದ ಕೋಠಿ ಆವರಣದಲ್ಲಿ ನಾಲ್ಕು ಮಹಿಳಾ ಹಾಸ್ಟೆಲ್‌ಗಳ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರು ಮಾಡಬೇಕು. ಹಾಸನ ತಾಲೂಕಿನ ಸೋಮನಹಳ್ಳಿ ಕಾವಲ್‌ನಲ್ಲಿ ತೋಟಗಾರಿಕೆ ಕಾಲೇಜು ಪ್ರಾಂಭಿಸಲು ಆಡಳಿತಾತ್ಮಕ ಮಂಜೂರಾತಿ ನೀಡಬೇಕು. ತೋಟಗಾರಿಕೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ 65 ಕೋಟಿ ರೂ. ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಕಂದಾಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಿರುವ ಕಾಮಗಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೆ ರಾಜಕೀಯ ದ್ವೇಷ ಸಾಧಿಸುವುದನ್ನು ಬಿಟ್ಟು ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.
ಸಕಲೇಶಪುರ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ತಡೆ: ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ 78 ಕೋಟಿ ರೂ. ಕಾಮಗಾರಿಗಳಿಗೆ ಸರ್ಕಾರ ಅನುದಾನ ತಡೆಹಿಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಎಚ್.ಕೆ.ಕುಮಾರಸ್ವಾಮಿ ಆರೋಪಿಸಿದರು. 146 ಕಾಮಗಾರಿಗಳಿಗೆ 78 ಕೋಟಿ ರೂ. ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆ ಪೈಕಿ 33 ಕೋಟಿ ರೂ. ತಾಂತ್ರಿಕ ಬಿಡ್ ಕೂಡ ಪೂರ್ಣಗೊಂಡಿದೆ. ಅಂತಹ ಕಾಮಗಾರಿಗಳನ್ನೂ ತಡೆಹಿಡಿದಿದ್ದಾರೆ.
ಅಧಿಕಾರಿಗಳನ್ನು ವಿಚಾರಿಸಿದರೆ ಯಾವುದೇ ಕಾಮಗಾರಿ ಮಾಡಬೇಕಾದರೂ ತಮ್ಮ ಪೂರ್ವಾನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿರಗಾವರ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು, 90 ಲಕ್ಷ ರೂ. ಅಂದಾಜಿನ ಸಂಪರ್ಕ ರಸ್ತೆಗಳ ಕಾಮಗಾರಿ ಆಗಬೇಕಾಗಿದೆ. ಈ ಕಾಮಗಾರಿಗಳ ಅನುದಾನವನ್ನೂ ತಡೆಹಿಡಿಯಲಾಗಿದೆ ಎಂದು ಆಪಾದಿಸಿದರು.
ಎಚ್.ಡಿ.ರೇವಣ್ಣ ಅವರು ಮಾತನಾಡಿ, ಕಾಚೇನಹಳ್ಳಿ ಏತ ನೀರಾವರಿಯ 2ನೇ ಹಂತದ ಕಾಮಗಾರಿ ಸುಮಾರು ಅರ್ಧ ಕಿ.ಮೀ.ನಾಲೆ ನಿರ್ಮಾಣದ ಕಾಮಗಾರಿಗೂ ಅನುದಾನ ತಡೆಹಿಡಿದ್ದಾರೆ. ಆ ಕಾಮಗಾರಿ ಪೂರ್ಣಗೊಂಡಿದ್ದರೆ 4ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯುತ್ತಿತ್ತು ಎಂದರು.
ಕಾಂಗ್ರೆಸ್, ಜೆಡಿಎಸ್ ಪಕ್ಷೇತರ ಅಭ್ಯರ್ಥಿ ಪರ ನಿಲ್ಲಲಿ: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ 17ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಅನಿಲ್‌ಕುಮಾರ್ ಪರ ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮತ ಚಲಾಯಿಸಿ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ತಿರುಗೇಟು ನೀಡಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಮನವಿ ಮಾಡಿದರು.
ಅನಿಲ್ ಕುಮಾರ್ ಅವರು ಕಾಂಗ್ರೆಸ್ ಮುಖಂಡರ ಒಡನಾಡಿಯಾಗಿದ್ದವರು. ಕಾಂಗ್ರೆಸ್ ಮುಖಂಡರ ಆಶಯದಂತೆಯೇ ಸ್ಪರ್ಧೆಗಿಳಿದಿದ್ದಾರೆ. ಹಾಗಾಗಿ ಅವರು ನಾಮಪತ್ರ ಸಲ್ಲಿಸುವಾಗ ನಾನು ಹಾಜರಿದ್ದೆ. ಚುನಾವಣೆಯ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ದನಾಗಿರುವೆ ಎಂದು ರೇವಣ್ಣ ಸ್ಪಷ್ಪಡಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ 105 ಶಾಸಕರಿದ್ದಾರೆ. ಅವರೆಲ್ಲರೂ ಅನಿಲ್‌ಕುಆಮರ್ ಅವರ ಪರ ಮತ ಚಲಾವಣೆ ಮಾಡುವ ವಿಶ್ವಾಸವಿದೆ ಎಂದೂ ಹೇಳಿದರು.
ಕರ್ನಾಟಕ ಬಂದ್‌ಗೆ ಜೆಡಿಎಸ್ ಬೆಂಬಲ: ಸರೋಜಿನಿ ಮಹಿಷಿ ವರದಿ ಸೇರಿದಂತೆ ಕನ್ನಡಿಗರ ಹಿತಾಸಕ್ತಿ ಸಂರಕ್ಷಣೆಗಾಗಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜೆಡಿಎಸ್ ಬೆಂಬಲಿಸಲಿದೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ, ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಮುಖ್ಯಸ್ಥರು ಜೆಡಿಎಸ್ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೇಳಿಲ್ಲ. ಆದರೂ ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂಬ ಉದ್ದೇಶದಿಂದ ಹೋರಾಟಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು.
ಅಶೋಕ್‌ಗೆ ರೇವಣ್ಣ ತಿರುಗೇಟು: ಹಳೇನಾಣ್ಯಗಳಿಗೂ ಬೆಲೆ ಇದೆ ಎಂಬುದನ್ನು ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಅರ್ಥಮಾಡಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದರು. ಜೆಡಿಎಸ್ ಸವಕಲು ನಾಣ್ಯ ಎಂದು ಆರ್. ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ದೆಹಲಿ ಚುನಾವಣೆಯ ಫಲಿತಾಂಶದ ನಂತರವಾದರೂ ಸವಕಲು ನಾಣ್ಯ, ಹಳೆಯ ನಾಣ್ಯಗಳೆಂದು ಟೀಕಿಸುವವರು ಪ್ರಾದೇಶಿಕ ಪಕ್ಷಗಳ ಶಕ್ತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದರು.
2008 ರಿಂದ 2013 ರವರೆಗೂ 5 ವರ್ಷ ಅಧಿಕಾರ ನಡೆಸಿದ ಬಿಜೆಪಿ ಆನಂತದ ಚುನಾವಣೆಯಲ್ಲಿ 40 ಸ್ಥಾನಗಳನ್ನು ಪಡೆದು 3ನೇ ಸ್ಥಾನಕ್ಕೆ ಇಳಿದಿದ್ದನ್ನು ಜೆಡಿಎಸ್‌ನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಲಿ. ಜೆಡಿಎಸ್ ರಾಜಕೀಯ ಏರಿಳಿತಗಳನ್ನು ಅನುಭವಿಸಿ ಪ್ರಬಲ ಪಕ್ಷವಾಗಿ ರಾಜ್ಯದಲ್ಲಿ ಬೇರೂರಿದೆ. 1989ರಲ್ಲಿ ಕೇವಲ 2 ಸ್ಥಾನ ಪಡೆದಿದ್ದ ಪಕ್ಷದ ನಾಯಕ ಎಚ್.ಡಿ.ದೇವೇಗೌಡರು ಆನಂತರ ಪಕ್ಷವನ್ನು ಬಲಗೊಳಿಸಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರು. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು. ಹಾಗಾಗಿ ಜೆಡಿಎಸ್ ಬಗ್ಗೆ ಟೀಕೆ ಮಾಡುವವರು ಇದೆಲ್ಲವನ್ನೂ ಹಿಂತಿರುಗಿ ನೋಡಬೇಕು ಎಂದು ತಿರುಗೇಟು ನೀಡಿದರು.