Advertisement

ಮತಬೇಟೆಗೆ ಜೆಡಿಎಸ್‌ ಭರವಸೆಗಳ ಮಹಾಪೂರ

10:42 AM Jul 21, 2017 | |

ಬೆಂಗಳೂರು: ಮಹಿಳಾ ಸಮಾವೇಶದೊಂದಿಗೆ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಜೆಡಿಎಸ್‌, ಅಧಿಕಾರಕ್ಕೆ ಬಂದರೆ 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಜೀವನ ಪರ್ಯಂತ ತಿಂಗಳಿಗೆ 5 ಸಾವಿರ ರೂ. ಹಾಗೂ ಗರ್ಭಿಣಿಯರಿಗೆ
9 ತಿಂಗಳು ಕಾಲ 6 ಸಾವಿರ ರೂ. ಗೌರವಧನ, ವಿಧವೆಯರು ಹಾಗೂ ಅಂಗವಿಕಲರ ಮಾಶಾಸನ 2 ಸಾವಿರ ರೂ.ಗೆ ಏರಿಸುವುದಾಗಿ ಘೋಷಿಸಿದೆ.

Advertisement

ನಗರದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ, ಯುವ ಸಮೂಹ, ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಸೆಳೆಯಲು ಭರಪೂರ ಭರವಸೆಗಳನ್ನೂ ಪ್ರಕಟಿಸಿತು. ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ದೃಷ್ಟಿಯಿಂದ ತಾನು ಶೇ.33 ಮಹಿಳಾ ಮೀಸಲಾತಿಗಾಗಿ ಹೋರಾಡಿದೆ. 1996 ರಲ್ಲಿ ಮಹಿಳಾ ಮೀಸಲಾತಿ ಮಂಡಿಸಿದೆ. ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ಲೋಕಸಭೆಯಲ್ಲಿ ಆನುಮೋದನೆ ಆಗಲಿಲ್ಲ. ಇದೀಗ ನರೇಂದ್ರ ಮೋದಿ ಮಸೂದೆ ಜಾರಿಗೆ ಮುಂದಾಗಬೇಕು. ಕೇಂದ್ರ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡರೆ
ಕಾಂಗ್ರೆಸ್‌ ಸಹ ವಿರೋಧ ಮಾಡಲ್ಲ. ತಾನೂ ಮೋದಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. 

ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದರೆ 70 ವರ್ಷ ತುಂಬಿದ ಹಿರಿಯ ನಾಯಕರಿಗೆ ಮಾಸಿಕ 5 ಸಾವಿರ ಹಾಗೂ ಗರ್ಭಿಣಿಯರಿಗೆ 9 ತಿಂಗಳು ಕಾಲ ಮಾಸಿಕ 6 ಸಾವಿರ ಗೌರವಧನ ನೀಡಲಾಗುವುದು. ಅಂಗವಿಕಲರು ಹಾಗೂ ವಿಧವೆಯರ ಮಾಶಾಸನ 2 ಸಾವಿರ ರೂ.ಗೆ ಏರಿಸಲಾಗುವುದು ಎಂದು ಘೋಷಿಸಿದರು. ಸಸಿ ನೆಡುವ ಅಭಿಯಾನಕ್ಕೆ 5 ಲಕ್ಷ
ಯುವಕ-ಯುವತಿಯರನ್ನು ಬಳಸಿಕೊಂಡು 25 ವರ್ಷ ಅವರಿಗೆ ಉದ್ಯೋಗ ಖಾತರಿಯೊಂದಿಗೆ ಮಾಸಿಕ 5 ರಿಂದ 6 ಸಾವಿರ ರೂ. ವೇತನ ನೀಡಲು ಯೋಜನೆ ಜಾರಿಗೊಳಿಸಲಾಗುವುದು. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಂಡು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲಾಗುವುದು. ಇದಕ್ಕೆ ಎಷ್ಟು ಸಾವಿರ ಕೋಟಿ ವೆಚ್ಚವಾದರೂ ಹಿಂದೇಟು
ಹಾಕುವುದಿಲ್ಲ ಎಂದರು.

ಸಮಾವೇಶದಲ್ಲಿ 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಂಡಿಸಿದ  ಮಹಿಳಾ ಮೀಸಲಾತಿ ಮಸೂದೆ ಪ್ರತಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ರೂಪಿಸಿದ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಲಾಯಿತು. ಐದು ಪ್ರಮುಖ ನಿರ್ಣಯಗಳನ್ನು ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯಕ್‌ ಸೂಚಿಸಿದರು. ಜೆಡಿಎಸ್‌
ವಕ್ತಾರ, ವಿಧಾನಪರಿಷತ್‌ ಸದಸ್ಯ ರಮೇಶ್‌ಬಾಬು ಅನುಮೋದಿಸಿದರು. ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್‌ ಹಾಗೂ ಲೀಲಾದೇವಿ ಆರ್‌. ಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು. 

ಸಮಾವೇಶದ ನಿರ್ಣಯಗಳು
ಮಹಿಳಾ ಮೀಸಲಾತಿ ಮಸೂದೆ ಕೂಡಲೇ ಮಂಡಿಸಿ ಜಾರಿಗೊಳಿಸಬೇಕು

Advertisement

ವಿಧಾನಸಭೆ-ಲೋಕಸಭೆಯಲ್ಲಿ ಮುಂದಿನ ಚುನಾವಣೆಯಿಂದಲೇ ಶೇ.33 ಮೀಸಲಾತಿ ಕೊಡಬೇಕು

ಅರೆಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆರಿಗೆ ರಜೆ, ಸೌಲಭ್ಯ ಸಹಿತ ವೇತನ ಕೊಡಬೇಕು

ರಾಜ್ಯದ ಅಂಗನವಾಡಿ ಕಾರ್ಯಕರ್ತರಿಗೆ ಇತರೆ ರಾಜ್ಯಗಳಲ್ಲಿ ನೀಡುತ್ತಿರುವ ವೇತನ ಜಾರಿಗೊಳಿಸಿ

ಮಹಿಳಾ ದೌರ್ಜನ್ಯ ತಡೆಗೆ ಪ್ರತಿ ಉಪ ವಿಭಾಗ ಮಟ್ಟದಲ್ಲಿ ಮಹಿಳಾ ಪೊಲೀಸ್‌ ಠಾಣೆ ಪ್ರಾರಂಭಿಸಿ

Advertisement

Udayavani is now on Telegram. Click here to join our channel and stay updated with the latest news.

Next