Advertisement

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಹೊಸಬರ ನೇಮಕಕ್ಕೆ ಚರ್ಚೆ

06:00 AM Jul 22, 2018 | |

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಚರ್ಚೆ ನಡೆದಿದ್ದು, ಹಿರಿಯ ನಾಯಕರಾದ ಎಚ್‌.
ವಿಶ್ವನಾಥ್‌, ಪಿ.ಜಿ.ಆರ್‌.ಸಿಂಧ್ಯಾ, ಬಿ.ಬಿ.ನಿಂಗಯ್ಯ ಅವರ ಹೆಸರು ಪರಿಶೀಲನೆಯಲ್ಲಿದೆ.

Advertisement

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ,ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಶನಿವಾರ ಪಕ್ಷದ ನಾಯಕರ ಜತೆ ಈ ಕುರಿತು ಚರ್ಚಿಸಿದ್ದು, ಆದಷ್ಟು ಶೀಘ್ರ ಜೆಡಿಎಸ್‌ಗೆ ನೂತನ ರಾಜ್ಯಾಧ್ಯಕ್ಷರ ನೇಮಕವಾಗಲಿದೆ.

ಪ್ರಸ್ತುತ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿರುವುದರಿಂದ ಕಾರ್ಯದೊತ್ತಡ ಹೆಚ್ಚಾಗಿದ್ದು ಪಕ್ಷ ಸಂಘಟನೆಗೆ ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ,ದೇವೇಗೌಡರ ಜತೆಗೂಡಿ ಪಕ್ಷ ಸಂಘಟಿಸಲು ಹೊಸಬರಿಗೆ ಅವಕಾಶ ಕೊಡಲು ತೀರ್ಮಾನಿಸಲಾಗಿದೆ.

ವೈ.ಎಸ್‌.ವಿ.ದತ್ತ ಹಾಗೂ ಮಧು ಬಂಗಾರಪ್ಪ ಅವರ ಹೆಸರು ಸಹ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನೂತನ ರಾಜ್ಯಾಧ್ಯಕ್ಷರ ನೇಮಕ ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಪುನರ್‌ ರಚನೆಗೂ ನಿರ್ಧರಿಸಲಾಗಿದ್ದು, ಇದಕ್ಕಾಗಿ ಪ್ರಮುಖ ನಾಯಕರ ಸಮಿತಿ ಸಹ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisement

ಸಭೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆಯಿತು. ಕಾಂಗ್ರೆಸ್‌
ಜತೆ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಷ್ಟವಾಗಬಹುದು.

ಆದರೆ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ಲಾಭವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಹೇಳಲಾಗಿದೆ.

ಸಭೆ ನಂತರ ಸುದ್ದಿಗಾರರೊಂದಿಗೆ ಎಚ್‌.ಡಿ.ದೇವೇಗೌಡ ಮಾತನಾಡಿ, ಮುಂದಿನ ತಿಂಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಲೋಕಸಭೆ ಚುನಾವಣೆ ಮೈತ್ರಿ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು.

ಇಂದಿನ ಸಭೆಯಲ್ಲಿ ಮೈತ್ರಿ ಅಥವಾ ಯಾರಿಗೆ ಎಷ್ಟು ಸೀಟು ಎಂಬ ಬಗ್ಗೆ ಚರ್ಚಿಸಿಲ್ಲ ಎಂದು ಸ್ಪಷ್ಪಡಿಸಿದರು.ಲೋಕಸಭಾ ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ. ರಾಜ್ಯಾದ್ಯಂತ ತಕ್ಷಣದಿಂದಲೇ ಸದಸ್ಯತ್ವ ಅಭಿಯಾನ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮ್ಮಿಶ್ರ ಸರ್ಕಾರದ ಹೊಸ ಯೋಜನೆಗಳು ಮತ್ತು ರೈತರ ಸಾಲಮನ್ನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪರಿಷತ್‌ ಸದಸ್ಯರಾದ ಅಪ್ಪಾಜಿಗೌಡ, ಟಿ.ಎ.ಶರವಣ, ಶಾಸಕ ಗೋಪಾಲಯ್ಯ, ಮುಖಂಡರಾದ ಎಚ್‌.ಸಿ.ನೀರಾವರಿ,
ಸುರೇಶ್‌ ಬಾಬು , ಜಫ್ರುಲ್ಲಾ ಖಾನ್‌, ನಾರಾಯಣರಾವ್‌ ಉಪಸ್ಥಿತರಿದ್ದರು.ಪಾಸ್‌ ನೀಡುವುದಾಗಿ ಹೇಳಿಕೆಯೇ ನೀಡಿಲ್ಲ
ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಹೇಳಿಕೆಯೇ ನೀಡಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು, ಉಚಿತ ಬಸ್‌ಪಾಸ್‌ ನೀಡಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ನಾನು ಹೇಳಿಯೇ ಇಲ್ಲ. ಎಲ್ಲದಕ್ಕೂ ಸಬ್ಸಿಡಿ ಕೊಡಿ ಎಂದರೆ ಹೇಗೆ ಸಾಧ್ಯ ಎಂದರು. ಪ್ರಧಾನಿಯವರು ಭಾರತ ಆರನೇ ಶ್ರೀಮಂತ ದೇಶ ಎಂದು ಹೇಳಿದ್ದು ಜನ ಶ್ರೀಮಂತರಾಗಿದ್ದಾರೆ. ಆದರೆ, ಎಲ್ಲದಕ್ಕೂ ಸಬ್ಸಿಡಿ ಕೇಳಿದರೆ ಎಲ್ಲಿಂದ ಕೊಡುವುದು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿರುವುದರಿಂದ ರಾಜ್ಯಾಧ್ಯಕ್ಷ ರಾಗಿ ಜೆಡಿಎಸ್‌ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ರಾಜ್ಯಾಧ್ಯಕ್ಷರ ಜತೆ ಪದಾಧಿಕಾರಿಗಳ ಬದಲಾವಣೆ ಆಗಬೇಕಿದೆ. ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಕ್ಕೆ ಸಮಿತಿ ರಚನೆಯಾಗಲಿದೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next