ದೊಡ್ಡಬಳ್ಳಾಪುರ: ಡಿ.27ರಂದು ನಡೆಯಲಿರುವ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಅಗತ್ಯ ಇರುವ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಹೇಳಿದರು.
ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಪಂಚಾಯಿತಿವಾರು ಮುಖಂಡರ ಹಾಗೂ ಆಕಾಂಕ್ಷಿಗಳ ಸಭೆಯನ್ನು ನಡೆಸಲಾಗುವುದು ಎಂದರು.
ಅಧಿಕೃತ ಅಭ್ಯರ್ಥಿ ಘೋಷಣೆ: ಸರ್ವ ಸಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ನಾಮ ಪತ್ರ ಸಲ್ಲಿಕೆಗೂ ಮುನ್ನವೇ ಜೆಡಿಎಸ್ ಬೆಂಬಲಿತ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದರು.
26 ಗ್ರಾಪಂನಲ್ಲೂ ಸ್ಪರ್ಧೆ: ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಐದು ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ ನಾಲ್ಕು ಅಭ್ಯರ್ಥಿಗಳು ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲೂ ಸಹ ನಮ್ಮ ಪಕ್ಷದ ಕಡೆಗೆ ಮತದಾರರಲ್ಲಿ ಹೆಚ್ಚಿನ ಒಲವು ಇದೆ. ಚುನಾವಣೆ ನಡೆಯಲಿರುವ ಎಲ್ಲಾ 26 ಗ್ರಾಮ ಪಂಚಾಯಿತಿಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲ್ಲಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿ ಕೊಳ್ಳುವುದಿಲ್ಲ. ಈಗಾಗಲೇ ಗ್ರಾಮ ಪಂಚಾ ಯಿತಿವಾರು ಆಕಾಂಕ್ಷಿಗಳ ಪಟ್ಟಿ ಸಿದ್ಧಡಿಸುವಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ, ಕಾರ್ಯಾಧ್ಯಕ್ಷ ಆರ್. ಕೆಂಪರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ವಿ.ಆಂಜನೇಗೌಡ, ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಸತೀಶ್, ಸಾಸಲು ಹೋಬಳಿ ಉಸ್ತುವಾರಿ ಬಿ.ರಾಜ್ ಗೋಪಾಲ್, ಮುಖಂಡರಾದ ದೇವರಾಜಮ್ಮ ಇದ್ದರು.