Advertisement

ಜೆಡಿಎಸ್‌ ವಿರುದ್ಧವೇ ತಿರುಗಿ ಬಿದ್ದ ನಾಯಕರು

04:21 PM Apr 25, 2023 | Team Udayavani |

ಮಂಡ್ಯ: ಜೆಡಿಎಸ್‌ನಲ್ಲಿ ಟಿಕೆಟ್‌ ಗೊಂದಲದಿಂದ ಬಂಡಾಯದ ಬಿಸಿ ತಟ್ಟಿದ್ದು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಪಕ್ಷದ ವಿರುದ್ಧವೇ ತೊಡೆ ತಟ್ಟಿದ್ದಾರೆ. ಸೋಮವಾರ ನಾಮಪತ್ರ ವಾಪಸ್‌ ಪಡೆಯುವ ಕೊನೇ ದಿನವಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ತಗ್ಗಹಳ್ಳಿ ವೆಂಕಟೇಶ್‌ ನಾಮಪತ್ರ ವಾಪಸ್‌ ಪಡೆಯದೇ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

Advertisement

ಜೆಡಿಎಸ್‌ ವಿರುದ್ಧ ಸ್ವಾಭಿಮಾನದ ಅಸ್ತ್ರ: ಕ್ಷೇತ್ರ ದಲ್ಲದ ವ್ಯಕ್ತಿಗೆ ಟಿಕೆಟ್‌ ನೀಡಿದ್ದರಿಂದ ಜೆಡಿಎಸ್‌ ವಿರುದ್ಧ ಸ್ವಾಭಿಮಾನದ ಅಸ್ತ್ರ ಬಳಸಲಾಗುತ್ತಿದೆ. ಸ್ವಾಭಿಮಾನಿ ಪಡೆ ಕಟ್ಟಿಕೊಂಡ ಶಾಸಕ ಎಂ. ಶ್ರೀನಿವಾಸ್‌, ನಿತ್ಯ ಸಚಿವ ಎಂದೇ ಖ್ಯಾತರಾಗಿದ್ದ ಕೆ.ವಿ.ಶಂಕರಗೌಡ ಮೊಮ್ಮಗ ಕೆ.ಎಸ್‌.ವಿಜಯ್‌ ಆನಂದ್‌ ಅವರನ್ನು ಕಣಕ್ಕಿಳಿಸಿದ್ದಾರೆ. ಸ್ವಾಭಿಮಾನದ ಹೆಸರಿನಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಬಳಕೆ ಮಾಡಿಕೊಂಡಿದ್ದರು. ಅದೇ ಮಾದರಿಯಲ್ಲಿ ಮತದಾರರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದ್ದಾರೆ.

1957ಘಟನೆಯ ನೆನಪು: 1957ರ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಕೆ.ವಿ.ಶಂಕರ ಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿ ಸ್ವಾತಂತ್ರ್ಯ ಹೋರಾಟ ಗಾಗ ಸಾಹುಕಾರ್‌ ಚನ್ನಯ್ಯ ಅವರನ್ನು ಕಣಕ್ಕಿಳಿಸ ಲಾಗುತ್ತದೆ. ಇದರಿಂದ ಅಸಮಾಧಾನಗೊಳ್ಳುವ ಕೆ.ವಿ.ಶಂಕರಗೌಡರ ಗುಂಪು ಹಿಂದಿನ ಅವ ಗೆ ಶಾಸಕರಾಗಿದ್ದ ಜಿ.ಎಸ್‌ .ಬೊಮ್ಮೇಗೌಡರನ್ನು ಕಣಕ್ಕಿಳಿಸಿ 1875 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದರು. ಇಂದು ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಎಂ.ಶ್ರೀನಿವಾಸ್‌ ಜೆಡಿಎಸ್‌ ವಿರುದ್ಧ ಬಂಡಾಯ ಸಾರಿ ಕೆ.ವಿ.ಶಂಕರಗೌಡರ ಮೊಮ್ಮಗನನ್ನೇ ಕಣಕ್ಕಿಳಿಸಿ ಸ್ವಾಭಿಮಾನದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರವೀಂದ್ರ ಶ್ರೀಕಂಠಯ್ಯಗೆ ತಲೆನೋವಾದ ವೆಂಕಟೇಶ್‌: ಜೆಡಿಎಸ್‌ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ತಗ್ಗಹಳ್ಳಿ ವೆಂಕಟೇಶ್‌ ಸ್ಪರ್ಧೆಯಿಂದ ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ರವೀಂದ್ರಶ್ರೀಕಂಠಯ್ಯಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದು ರವೀಂದ್ರಶ್ರೀಕಂಠಯ್ಯಗೆ ತಲೆ ನೋವು ತಂದಿದೆ.

ಜೆಡಿಎಸ್‌ ವಿರುದ್ಧ ತೊಡೆತಟ್ಟಿರುವ ತಗ್ಗಹಳ್ಳಿ ವೆಂಕಟೇಶ್‌ ವರಿಷ್ಠರ ನಿರ್ಲಕ್ಷ್ಯ, ಶಾಸಕ ರವೀಂದ್ರಶ್ರೀಕಂಠಯ್ಯ ವರ್ತನೆಗೆ ಬೇಸತ್ತು ಈಗಾಗಲೇ ಜೆಡಿಎಸ್‌ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇದೀಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಜೆಡಿಎಸ್‌ಗೆ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಮತಗಳ ಇಬ್ಭಾಗದಿಂದ ಜೆಡಿಎಸ್‌ಗೆ ಹಿನ್ನೆಡೆ ಸಾಧ್ಯತೆ: ಜಿಲ್ಲೆಯಲ್ಲಿ ಜೆಡಿಎಸ್‌ ಮತಗಳು ಇಬ್ಭಾಗವಾಗುವುದರಿಂದ ಜೆಡಿಎಸ್‌ಗೆ ಹಿನ್ನಡೆಯಾಗಿರುವುದೇ ಹೆಚ್ಚು. ಇದೀಗ ಮಂಡ್ಯ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಜೆಡಿಎಸ್‌ ಮತಗಳು ಛಿದ್ರವಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್‌ನ ಒಳ ಜಗಳ, ಬಂಡಾಯದ ಲಾಭ ಮೂರನೇ ವ್ಯಕ್ತಿಗೆ ಲಾಭವಾಗಿರುವುದೇ ಹೆಚ್ಚು. ಹಿಂದೆ ಇದೇ ರೀತಿ ಆಗಿರುವ ಉದಾಹರಣೆಗಳಿವೆ.

ಕಾಂಗ್ರೆಸ್‌ ಬಂಡಾಯವಾಗಿ ಚಂದ್ರಶೇಖರ್‌ ಕಣಕ್ಕೆ : ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯವಾಗಿರು ವಂತೆ ಕಾಂಗ್ರೆಸ್‌ಗೂ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್‌ ಮುಖಂಡ ಪಾಲಹಳ್ಳಿ ಚಂದ್ರಶೇಖರ್‌ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧೆಗಿಳಿರುವುದು ಕಾಂಗ್ರೆಸ್‌ಗೂ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಇದರಿಂದ ಕೈ-ದಳಗಳ ಮತಗಳು ಛಿದ್ರವಾಗು ವುದರಿಂದ ಶ್ರೀರಂಗಪಟ್ಟಣ ಕಣ ರೋಚಕತೆ ಪಡೆದಿದೆ.

ಕಮಲ ವಿರುದ್ಧ ತಿರುಗಿ ಬಿದ್ದ ಫೈಟರ್‌ ರವಿ: ಟಿಕೆಟ್‌ ನಿರೀಕ್ಷೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಬಿ.ಎಂ.ಮಲ್ಲಿಕಾರ್ಜುನ್‌ ಆಲಿಯಾಸ್‌ ಫೈಟರ್‌ ರವಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿ ದ್ದಾರೆ. ಕ್ಷೇತ್ರದಲ್ಲಿ ತನ್ನದೇ ರೀತಿ ಸಂಚಲನ ಮೂಡಿಸಿ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಟಿಕೆಟ್‌ ಖಚಿತ ಎನ್ನಲಾಗುತ್ತಿತ್ತು. ಅದರ ಬೆನ್ನಲ್ಲೇ ರೌಡಿಶೀಟರ್‌ ಎಂಬ ಆರೋಪಗಳು ಕೇಳಿ ಬಂದವು. ಇದರಿಂದ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬೇಕಾ ಯಿತು. ಇದರ ಮುಜುಗರ ತಪ್ಪಿಸಿಕೊಳ್ಳಲು ಕೇಸರಿ ಪಾಳೆಯ ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಬಿಜೆಪಿ ಸೇರ್ಪಡೆ ಮಾಡಿಕೊಂಡು ಪತ್ನಿ ಸುಧಾ ಶಿವರಾಮೇಗೌಡ ರಿಗೆ ಟಿಕೆಟ್‌ ಘೋಷಣೆ ಮಾಡಿತು. ಇದರಿಂದ ಬೇಸತ್ತ ಫೈಟರ್‌ ರವಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next