ದೇವನಹಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದಕೂಡಲೇ ಪಂಚರತ್ನ ಯೋಜನೆಗಳು ಜಾರಿಯಾಗಲಿವೆ ಎಂದು ದೇವನಹಳ್ಳಿ ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ 21ನೇ ವಾರ್ಡಿನಲ್ಲಿ ಮಹೇಶ್ವರಮ್ಮ ದೇವಾಲಯ ಸಮೀಪದಲ್ಲಿ ತಾಲೂಕು ಜೆಡಿಎಸ್ ಮತ್ತು ಟೌನ್ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಕುಮಾರಣ್ಣ ಕನಸಿನ ಯೋಜನೆ ಪಂಚರತ್ನ ಯೋಜನೆಯ ಕರಪತ್ರಗಳನ್ನು ಜನರಿಗೆ ಹಂಚಿ ಮನವಿ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜನತಾಪರ್ವ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಜನತಾಪರ್ವ ಕಾರ್ಯಕ್ರಮದ ಅಡಿಯಲ್ಲಿ ಜನತಾ ಜಲಧಾರೆ, ಜನತಾಮಿತ್ರ ಮತ್ತು ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು. 123 ಸ್ಥಾನಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಳೆದ ಐದು ವರ್ಷದಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದೇನೆ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಅಜೆಂಡಾ ಆಗಿದೆ. ತಾಲೂಕಿನ ಪ್ರತಿ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಿಗೆ ಹೋಗಿ ಮನೆ ಮನೆಗೆ ತೆರಳಿ ಶಾಸಕರ ಅಭಿವೃದ್ಧಿ ಕಾರ್ಯ, ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯ ಸಂಬಂಧಪಟ್ಟಂತೆ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.
ವಸತಿ ರಹಿತರಿಗೆ ಮನೆ ನಿರ್ಮಾಣ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳಲ್ಲಿ ಶಿಕ್ಷಣವೇ ಆಧುನಿಕ ಶಕ್ತಿ ಅಡಿಯಲ್ಲಿ ಗ್ರಾಪಂಗೆ ಒಂದರಂತೆ ಉತ್ತಮ ಹೈಟೆಕ್ ಶಾಲೆ ಸ್ಥಾಪಿಸುವುದು. ಆರೋಗ್ಯ ಸಂಪತ್ತು ಯೋಜನೆ ಅಡಿಯಲ್ಲಿ ಮಾನವನ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಆರೋಗ್ಯವೇ ಅಡಿಪಾಯ. ಪಂಚಾಯಿತಿ ಕೇಂದ್ರಕ್ಕೆ ಒಂದರಂತೆ 30 ಹಾಸಿಗೆಗಳ ಹೈಟೆಕ್ ಆಸ್ಪತ್ರೆ, ರೈತ ಚೈತನ್ಯ ಯೋಜನೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 24ಗಂಟೆ ಉಚಿತ ವಿದ್ಯುತ್ ಒದಗಿಸುವುದು. ತಂತ್ರಜ್ಞಾನ ಆಧಾರಿತ ವ್ಯವ ಸಾಯ, ವಸತಿಯ ಆಸರೆ ಯೋಜನೆಯಡಿ ಯಲ್ಲಿ ಸರ್ವರಿಗೂ ಸ್ವಂತ ಸೂರು ಎಂಬ ಸೂತ್ರದಡಿಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿ ಸುವುದು ಈ ಕಾರ್ಯಕ್ರಮದ ಗುರಿಯಾಗಿದೆ ಎಂದರು.
ಬೂತ್‌ಮಟ್ಟದಿಂದ ಪಕ್ಷ ಸಂಘಟನೆ: ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕರನ್ನು ಘೋಷಿಸಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಶಾಸಕರು ತಾಲೂಕಿನಲ್ಲಿ ಐದು ವರ್ಷಗಳ ಕಾಲ ಉತ್ತಮವಾಗಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಪ್ರತಿ ಬೂತ್‌ಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಟೌನ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಶಾಸಕರ ಪತ್ನಿ ನಾಗರತ್ನ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಸದಸ್ಯ ಎಸ್.ನಾಗೇಶ್, ವೈ.ಆರ್. ರುದ್ರೇಶ್, ಕೋಮಲಾ, ಲೀಲಾವತಿ, ಪುಷ್ಪಲತಾ, ಮಾಜಿ ಪುರಸಭಾ ಅಧ್ಯಕ್ಷ ನರಸಿಂಹಮೂರ್ತಿ, ಎಂ.ಕುಮಾರ್, ದೇವರಾಜ್, ಟಿ.ರವಿ, ಮಾಜಿ ಅಧ್ಯಕ್ಷ ಆರ್.ಭರತ್ ಕುಮಾರ್,ಕಾಳಪ್ಪನವರ ವೆಂಕಟೇಶ್, ಮನಗೊಂಡನಹಳ್ಳಿ ಜಗದೀಶ್, ಮೀನಾಕ್ಷಿ ಹಾಗೂ ಕಾರ್ಯಕರ್ತರು ಇದ್ದರು.