Advertisement

ವರ್ಷಕ್ಕೆ 32 ಜಯಂತಿಗಳು; ಕಾರ್ಯಾಂಗದ ಕಾಲುಭಾಗ ಸಭೆಗಳಿಗೇ ವ್ಯಯ

08:33 PM Feb 16, 2023 | Team Udayavani |

ವಿಧಾನ ಪರಿಷತ್ತು: ಸಮುದಾಯಕ್ಕೊಂದು ಸರ್ಕಾರಿ ಜಯಂತಿ ಘೋಷಿಸಿದ್ದರಿಂದ ಅವುಗಳ ಆಚರಣೆ, ಪೂರ್ವಸಿದ್ಧತೆಗಳಿಗಾಗಿಯೇ ಕಾರ್ಯಾಂಗದ ಶೇ. 25ರಷ್ಟು ಶ್ರಮ ವ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಯಂತಿಗಳ ಆಚರಣೆ ಬಗ್ಗೆ ಪುನರ್‌ವಿಮರ್ಶೆ ಅವಶ್ಯಕತೆ ಇದೆ ಎಂದು ಜೆಡಿಎಸ್‌ನ ಗೋವಿಂದರಾಜು ತಿಳಿಸಿದರು.

Advertisement

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನನ್ನ ಮಾಹಿತಿ ಪ್ರಕಾರ ಪ್ರತಿ ಇಲಾಖೆಯಲ್ಲೂ ಶೇ. 50ಕ್ಕಿಂತ ಕಡಿಮೆ ಸಿಬ್ಬಂದಿ ಇದ್ದಾರೆ. ಈ ಮಧ್ಯೆ ವರ್ಷಕ್ಕೆ 32 ವಿವಿಧ ಜಯಂತಿಗಳನ್ನು ಆಚರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಪೂರ್ವಸಿದ್ಧತಾ ಸಭೆಗಳು ನಡೆಯುತ್ತವೆ. ಇದಕ್ಕಾಗಿಯೇ ಕೋಟ್ಯಂತರ ರೂ.ಖರ್ಚಾಗುತ್ತದೆ. ಜತೆಗೆ ಶ್ರಮ ಕೂಡ ವ್ಯಯ ಆಗುತ್ತದೆ. ಹೀಗಾಗಿ ಇಷ್ಟೊಂದು ಜಯಂತಿಗಳನ್ನು ಸರ್ಕಾರದಿಂದ ಆಚರಿಸುವ ಅಗತ್ಯತೆ ಬಗ್ಗೆ ಮತ್ತೂಮ್ಮೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರವು ಜಾತಿ- ಸಮುದಾಯಗಳನ್ನು ತೃಪ್ತಿಪಡಿಸಲು ಹೀಗೆ ಜಯಂತಿಗಳನ್ನು ಆಚರಿಸುತ್ತಿರುವುದು ನೋವಿನ ಸಂಗತಿ ಎಂದ ಅವರು, ಇದಕ್ಕಾಗಿ ನಡೆಯುವ ಪೂರ್ವಭಾವಿ ಸಭೆಗಳಿಗಾಗಿಯೇ ವಾರ್ಷಿಕ ಕೋಟ್ಯಂತರ ರೂಪಾಯಿ ಖರ್ಚಾಗಲಿದೆ ಎಂದರು.

ಈ ಹಿಂದೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಜಯಂತಿಗಳಿಗೆ ಸಂಬಂಧಿಸಿದಂತೆ ಸಮಿತಿಯು ವರದಿಯೊಂದನ್ನು ಸಲ್ಲಿಸಿತ್ತು. ಅದರ ಶಿಫಾರಸುಗಳು ಏನು? ಅದರ ಅನುಷ್ಠಾನ ಮತ್ತಿತರ ವಿಷಯಗಳು ಗೊತ್ತಾಗಲೇ ಇಲ್ಲ. ಈಗ ಅದರ ಮೇಲೆ ಬೆಳಕು ಚೆಲ್ಲಬೇಕು ಎಂದು ಆಗ್ರಹಿಸಿದರು.

ಶಾಸಕನಾಗುವುದು “ಶಾಪ’ವಾಗಿದೆ:

Advertisement

“ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕೆಲಸಗಳು ಆಗುತ್ತಿಲ್ಲ. ಮೊದಲೆಲ್ಲ ಶಾಸಕನಾಗುವುದು ಪುಣ್ಯ ಎನ್ನಲಾಗುತ್ತಿತ್ತು. ಆದರೆ, ಈಗಿನ ವ್ಯವಸ್ಥೆಯಲ್ಲಿ ಶಾಪ ಅನಿಸುತ್ತಿದೆ’ ಎಂದು ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.  “ತೋಟಗಾರಿಕೆ ವಲಯದಲ್ಲಿ ಕೋಲಾರ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಕಳೆದೆರಡು ವರ್ಷಗಳಿಂದ ತೋಟಗಾರಿಕೆ ಸಚಿವರು ಒಂದು ಸಭೆಯನ್ನೂ ನಡೆಸಿಲ್ಲ. ಇದರಿಂದ ಕೋಲಾರ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆಯೂ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next