ಮಂಡ್ಯ: ಜಿಲ್ಲೆಯಲ್ಲಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ನಡುವಿನ ವಾಗ್ಯುದ್ಧ ಮತ್ತೆ ಮುಂದುವರಿದಿದೆ.
ಕಮಿಷನ್ ವಿಚಾರವನ್ನು ಸುಮಲತಾ ಮುನ್ನೆಲೆಗೆ ತಂದಿದ್ದೇ ಸಂಘರ್ಷಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಕೇಳಿ ಬಂದ ಬೆನ್ನಲ್ಲೇ ಜಿಲ್ಲೆಯಲ್ಲಿ ಶಾಸಕರು ಶೇ.100ಕ್ಕೆ 500ರಷ್ಟು ಕಮಿಷನ್ ಪಡೆಯುತ್ತಿದ್ದಾರೆಂಬ ಗಂಭೀರ ಆರೋಪವನ್ನು ಸುಮಲತಾ ಮಾಡಿದ್ದಾರೆ. ಇದಕ್ಕೆ ಜೆಡಿಎಸ್ ಶಾಸಕರು ಸಹ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸುಮಲತಾ, ಟೆಂಡರ್ ಆಗುತ್ತಿದ್ದಂತೆ ಜನಪ್ರತಿನಿಧಿಗಳು ಕಮಿಷನ್ ಕೇಳುತ್ತಾರೆ. ಕಮಿಷನ್ ಕೊಡುವವರೆಗೂ ಕೆಲಸ ಮಾಡುವುದಕ್ಕೆ ಬಿಡಲ್ಲ ಎಂದು ಪರೋಕ್ಷವಾಗಿ ಮಂಡ್ಯದ ಜೆಡಿಎಸ್ ಶಾಸಕ ವಿರುದ್ಧ ಆರೋಪ ಮಾಡಿದ್ದಾರೆ.
ಸುಮಲತಾ ಆರೋಪಕ್ಕೆ ದಳಪತಿಗಳು ತಿರುಗೇಟು ನೀಡಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‌ಗೌಡ ಹಾಗೂ ಡಿ.ಸಿ.ತಮ್ಮಣ್ಣ ಕಿಡಿಕಾರಿದ್ದಾರೆ. ಕ್ಷೇತ್ರಕ್ಕೆ ಬಂದಾಗಲೆಲ್ಲ ಏನಾದರೂ ಒಂದು ಗೊಂದಲ ಹೇಳಿಕೆ ನೀಡಿ ಹೋಗುತ್ತಾರೆ. ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಎಸೆದಿದ್ದಾರೆ.
ಇದಕ್ಕೂ ಮೊದಲು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹಾಗೂ ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ಎರಡೂ ಹೇಳಿಕೆಗಳು ದಳ ಶಾಸಕರನ್ನು ಕೆರಳುವಂತೆ ಮಾಡಿತ್ತು. ಆಗಲೂ ಸಂಸದೆ ಹಾಗೂ ದಳಪತಿಗಳ ನಡುವೆ ರಾಜಕೀಯ ವಾಕ್ಸಮರವೇ ನಡೆದಿತ್ತು. ಈಗ ಮತ್ತೂಮ್ಮೆ ಕಮಿಷನ್ ವಿಚಾರದಲ್ಲಿ ಪರೋಕ್ಷವಾಗಿ ಜೆಡಿಎಸ್ ಶಾಸಕರ ವಿರುದ್ಧ ಆರೋಪ ಮಾಡಿದ್ದರಿಂದ ರಾಜಕೀಯ ವಾಕ್ಸಮರ ಮತ್ತೆ ಮುನ್ನೆಲೆಗೆ ಬಂದಿದೆ.