Advertisement

ಜೆಡಿಎಸ್‌ ಶಾಸಕರು ಭದ್ರ, ಸರ್ಕಾರವೂ ಸುಭದ್ರ

11:20 PM Jul 03, 2019 | Team Udayavani |

ಬೆಂಗಳೂರು: “ಕಾಂಗ್ರೆಸ್‌ನ ಇಬ್ಬರು ಶಾಸಕರ ರಾಜೀನಾಮೆ ವಿಚಾರವನ್ನು ಸಿದ್ದರಾಮಯ್ಯ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ನೋಡಿಕೊಳ್ತಾರೆ’ ಎಂದಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, “ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಬುಧವಾರ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿದ ದೇವೇಗೌಡರು, ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. “ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಏನಾದರೂ ಸಮಸ್ಯೆ ಬಂದರೆ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿದ್ದು, ಅದನ್ನು ನಿಭಾಯಿಸುತ್ತಾರೆ. ಕಾಂಗ್ರೆಸ್‌ ಶಾಸಕರ ರಾಜೀನಾಮೆಯಿಂದ ಯಾವುದೇ ತೊಂದರೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಆನಂದ್‌ ಸಿಂಗ್‌ ಅವರು ರಾಜೀನಾಮೆ ಕೊಟ್ಟಿದ್ದು ಜಿಂದಾಲ್‌ ವಿಚಾರಕ್ಕೆ. ಇದು ದೊಡ್ಡ ಸಮಸ್ಯೆಯಲ್ಲ. ಇನ್ನು, ಜೆಡಿಎಸ್‌ನ ನಮ್ಮ 37 ಶಾಸಕರು ಭದ್ರವಾಗಿದ್ದಾರೆ. ಕಾಂಗ್ರೆಸ್‌ನ ಉಳಿದ ಶಾಸಕರು ಭದ್ರವಾಗಿಯೇ ಇದ್ದಾರೆ. ಸರ್ಕಾರ ಕೂಡ ಭದ್ರವಾಗಿದೆ ಎಂದರು.

ಅಲ್ಪಸಂಖ್ಯಾತ ಮುಖಂಡರ ಸಭೆ: ಇದಕ್ಕೂ ಮೊದಲು ಪಕ್ಷದ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಮಾತನಾಡಿ, ಬಿಬಿಎಂಪಿ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಮಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಅದಕ್ಕೆ ಬೇರೆ, ಬೇರೆ ಕಾರಣಗಳಿವೆ. ಆದರೆ, ಈಗ ನಮ್ಮದೇ ಸರ್ಕಾರ ಇದೆ. ಎಲ್ಲ ವರ್ಗಕ್ಕೆ ಯೋಜನೆ ನೀಡಿದ್ದೇವೆ. ರೈತರ ಸಾಲಮನ್ನಾ ಮಾಡಿದ್ದೇವೆ. ಇದೆಲ್ಲವನ್ನೂ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

Advertisement

ಮಧು ಬಂಗಾರಪ್ಪ, ಜಫ್ರುಲ್ಲಾಖಾನ್‌, ಕೋನರೆಡ್ಡಿ ಉಪಸ್ಥಿತರಿದ್ದರು. ಕಾಂಗ್ರೆಸ್‌ ಸೋಲಿಗೆ ರಾಹುಲ್‌ ಕಾರಣವಲ್ಲ: ರಾಹುಲ್‌ ಗಾಂಧಿಯವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ರಾಹುಲ್‌ ಗಾಂಧಿ ಕಾರಣರಲ್ಲ.

ರಾಹುಲ್‌ ಗಾಂಧಿಯವರು ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ಪ್ರಚಾರ ಮಾಡಿದರು. ಆದರೂ ಜನರು ಮೋದಿಗೆ ಆಶೀರ್ವಾದ ಮಾಡಿದರು. ಸೋಲಿಗೆ ರಾಹುಲ್‌ ಗಾಂಧಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.

ರಾಹುಲ್‌ ಗಾಂಧಿ ಅವರಲ್ಲಿ ಹೋರಾಟದ ಮನೋಭಾವವಿತ್ತು. ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವು ವಿಷಯ ಇಟ್ಟು ಹೋರಾಟ ಮಾಡಿದ್ದರು. ಅವರ ಕೈಲಾದ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ರಮೇಶ್‌ ಜಾರಕಿಹೊಳಿ 80 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂಬ ಜೆಡಿಎಸ್‌ ಶಾಸಕ ಕೆ.ಮಹದೇವ್‌ ಹೇಳಿಕೆ ವಿಚಾರವಾಗಿ ದೇವೇಗೌಡರ ಬಳಿ ಕೇಳಿದಾಗ, “ಅಂತಹ ವಿಚಾರಗಳನ್ನೆಲ್ಲಾ ನನ್ನ ಬಳಿ ಕೇಳಬೇಡಿ. ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.

ಅಲ್ತಾಫ್ ಖಾನ್‌ ಭಾಷಣಕ್ಕೆ ಕಾರ್ಯಕರ್ತರ ಅಡ್ಡಿ: ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಚಾಮರಾಜಪೇಟೆಯ ಅಲ್ತಾಫ್ ಖಾನ್‌ ಭಾಷಣ ಮಾಡುವಾಗ ವಾಗ್ವಾದ ನಡೆಯಿತು. ಚಾಮರಾಜಪೇಟೆಯಲ್ಲಿ ನಮ್ಮ ಪಕ್ಷದವರೇ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ. ಹಾಗಾಗಿಯೇ ಮೈತ್ರಿ ಅಭ್ಯರ್ಥಿ ಸೋತರು ಎಂದರು. ಇದರಿಂದ ಕುಪಿತಗೊಂಡ ಕಾರ್ಯಕರ್ತರು, ಭಾಷಣ ನಿಲ್ಲಿಸುವಂತೆ ಒತ್ತಾಯಿಸಿದರು.

ಆಗ ವೇದಿಕೆಯಲ್ಲಿದ್ದ ಮುಖಂಡರು ಅಲ್ತಾಫ್ಗೆ ಕುಳಿತುಕೊಳ್ಳಲು ಸೂಚನೆ ನೀಡಿದರು. ಅಲ್ತಾಫ್ ಮಾತು ಮುಂದುವರಿಸಿದರೂ ವಿರೋಧ ವ್ಯಕ್ತವಾಗಿ ಮಾತು ನಿಲ್ಲಿಸುವವರೆಗೂ ಕಾರ್ಯಕರ್ತರು ಗದ್ದಲ ಮಾಡುವುದನ್ನು ಬಿಡಲಿಲ್ಲ. ಈ ಸಂದರ್ಭದಲ್ಲಿ ದೇವೇಗೌಡರು ಎಲ್ಲವನ್ನೂ ಮೌನವಾಗಿಯೇ ವೀಕ್ಷಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next