Advertisement

ತುಮಕೂರು, ಕೋಲಾರ ಕಾಂಗ್ರೆಸ್‌ ಮುಕ್ತಕ್ಕೆ ಸಂಕಲ್ಪ: ಸಿ.ಎಂ.ಇಬ್ರಾಹಿಂ

11:45 PM Aug 27, 2022 | Team Udayavani |

ತುಮಕೂರು: ತುಮಕೂರು ಮತ್ತು ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಕ್ತ ಮಾಡಿದ್ದೇವೆ. ಈಗ ತುಮಕೂರು ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಮಾಡಲು ಹೊರಟ್ಟಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

Advertisement

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ.ಸೂಲಗಿತ್ತಿ ನರಸಮ್ಮನವರ 102ನೇ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40% ಬಿಜೆಪಿ ಸರ್ಕಾರ, 20 ಪರ್ಸೆಂಟೇಸ್‌ ಕಾಂಗ್ರೆಸ್‌ ಸರ್ಕಾರ ಎಂದು ಗುತ್ತಿಗೆದಾರರೆ ಹೇಳಿದ್ದಾರೆ.

ಆದರೆ ನಮ್ಮ ಜೆಡಿಎಸ್‌ ಪಕ್ಷ ಡೆಲ್ಲಿಯ ನಾಯಕರಿಗೆ ದುಡ್ಡು ಕೊಡಬೇಕಾಗಿಲ್ಲ. ನಮ್ಮ ನಾಡು, ನೆಲ, ಜಲ ರಕ್ಷಣೆ ಕಾಪಾಡುವುದೇ ನಮ್ಮ ಧ್ಯೇಯ ಎಂದರು.

ತನಿಖೆಯಾಗಲಿ: ನಾವು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಯಾವುದೇ ಕಮೀಷನ್‌ ಪಡೆಯುವ ಪ್ರಮೇಯವೇ ಬರುವುದಿಲ್ಲ. ನಮಲ್ಲಿ ಏನಿದ್ದರೂ ನಮ್ಮ ದುಡ್ಡು ನಮ್ಮ ಮನೆಗೆ ಮಾತ್ರ ಎಂದರು. 40 ಪರ್ಸೆಂಟೇಸ್‌ ಕಮೀಷನ್‌ ದಂಧೆ ಯಿಂದಾಗಿ ಈಗಾಗಲೇ ಬಿಜೆಪಿ ಕಾರ್ಯಕರ್ತನೇ ಸತ್ತಿದ್ದಾನೆ. ಈ ದಂಧೆ ಕುರಿತು ನ್ಯಾಯಾಂಗ ತನಿಖೆ ಯಾಗಲೇಬೇಕು ಎಂದ ಅವರು, ಯಾವ ಪಕ್ಷದ ಅವಧಿಯಲ್ಲಾದರೂ ಕಮೀಷನ್‌ ದಂಧೆ ನಡೆದಿದ್ದರೂ ನ್ಯಾಯಾಂಗ ತನಿಖೆಯಾಗಲಿ ಎಂದು ಹೇಳಿದರು.

ಭ್ರಷ್ಟಾಚಾರ ಇಲ್ಲದೇ ಇರುವ ಇಲಾಖೆ ಯಾವುದು ಎಂದು ಪ್ರಶ್ನಿಸಿದ ಅವರು, ಶಾಲಾ ಶಿಕ್ಷಕರು, ಅಟೆಂಡರ್‌, ಜವಾನರ ವರ್ಗಾವಣೆಗೂ ಈ ಸರ್ಕಾರ ಲಂಚ ಪಡೆಯುತ್ತಿದೆ. ಭ್ರಷ್ಟಾಚಾರವನ್ನೆ ಬಿಜೆಪಿ ಶಿಷ್ಟಾಚಾರವನ್ನಾಗಿ ಮಾಡಿಕೊಂಡಿದೆ ಎಂದು ಹರಿಹಾಯ್ದರು.

Advertisement

ಬ್ರಾಹ್ಮಣರಲ್ಲೇ ಎರಡು ಪಂಗಡ: ರಾಜ್ಯದ ಜನರ ಆರೋಗ್ಯ, ನೆಲ, ಜಲ, ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಪಂಚರತ್ನ ಯೋಜನೆ ಅನುಷ್ಠಾನಗೊಳಿಸು ವುದು ನಮ್ಮ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ಬ್ರಾಹ್ಮಣರನ್ನೇ ಎರಡು ಪಂಗಡಗಳನ್ನಾಗಿ ಮಾಡಿದ್ದಾರೆ. ಹೀಗಿರು ವಾಗ ಅಲ್ಪಸಂಖ್ಯಾತರನ್ನು ಒಡೆದು ಆಳುವುದು ಇವರಿಗೆ ಕಷ್ಟವೇ ಎಂದು ಗುಡುಗಿದರು. ಜೆಡಿಎಸ್‌ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ.ದೇವೇ ಗೌಡರು ಎಲ್ಲೂ ಹೋಗುವುದಿಲ್ಲ. ಜೆಡಿಎಸ್‌ ಪಕ್ಷದಲ್ಲೇ ಇರುತ್ತಾರೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

“ನಾವು ಸಾಬರು, ಹೇಳಿದ ಜ್ಯೋತಿಷ್ಯ ಸುಳ್ಳಾಗಲ್ಲ’
ತುಮಕೂರಿನಲ್ಲಿ ಒಂದೇ ಒಂದು ಸೀಟು ಕಾಂಗ್ರೆಸ್‌ ಬರುವುದಿಲ್ಲ. ನಾವು ಸಾಬರು, ನಾವು ಹೇಳುವ ಜ್ಯೋತಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ. ಬೇಕಾದರೆ ನನ್ನ ಮಾತನ್ನು ಚುನಾವಣೆಯಾದ ಬಳಿಕ ನೆನಪಿಸಿಕೊಳ್ಳಿ ಎಂದರು. ನಮ್ಮದೇನಿದ್ದರೂ ನಾರ್ಮಲ್‌ ಡಿಲಿವರಿ, ಆಪರೇಷನ್‌ ಮಾಡುವುದಿಲ್ಲ ಎಂದು ಅವರು ಆಪರೇಷನ್‌ ಜೆಡಿಎಸ್‌ ಮಾಡುತ್ತೀರಾ ಎಂಬ ಪ್ರಶ್ನೆಗೆ ಸಿಎಂ ಇಬ್ರಾಹಿಂ ಈ ರೀತಿ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next