ಬಾಗಲಕೋಟೆ: ಹಿರಿಯ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಸ್ವಾಮೀಜಿಯೊಬ್ಬರಿಂದ 1 ಕೋಟಿ ರೂ. ಪಡೆದು ಮತ್ತಷ್ಟು ಹಣ ಕೊಡದಿದ್ದರೆ ಮಾನ ಮರ್ಯಾದೆ ಹರಾಜು ಮಾಡಿ, ಜೈಲಿಗೆ ಹಾಕಿಸುವ ಬೆದರಿಕೆಯೊಡ್ಡಿದ್ದ ಜೆಡಿಎಸ್ ನಾಯಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಾಗಲಕೋಟೆ ತಾಲೂಕಿನ ಸಿಮೀಕೇರಿಯ ರಾಮಾರೂಢ ಮಠದ ಶ್ರೀ ಪರಮ ರಾಮಾರೂಢ ಸ್ವಾಮೀಜಿ ಮೋಸ ಹೋದವರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್ನಲಾದ, 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭೆ ಕ್ಷೇತ್ರಕ್ಕೆ ಜೆಡಿಎಸ್ ಅಧಿಕೃತ ಅಭ್ಯರ್ಥಿಯೂ ಆಗಿದ್ದ ಪ್ರಕಾಶ ಮುಧೋಳ ಬಂಧನಕ್ಕೊಳಗಾದವನು.
ಆತನಿಂದ ಪೊಲೀಸರು 82 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಇನ್ನುಳಿದ 18 ಲಕ್ಷ ರೂ.ಗಳನ್ನು ಬೇರೆಯವರಿಗೆ ಸಾಲದ ರೂಪದಲ್ಲಿ ಕೊಟ್ಟಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.
ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯದಲ್ಲಿ ಪೊಲೀಸ್ ಇಲಾಖೆ ತೊಡಗಿತ್ತು. ಬಂದೋಬಸ್ತ್ನಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ಕರೆ ಮಾಡಿದ ಈ ವಂಚಕ, “ನಾನು ಡಿವೈಎಸ್ಪಿ ಮಾತಾಡುವುದು. ನಿಮ್ಮ ವ್ಯಾಪ್ತಿಯ ರಾಮಾರೂಢಮಠದ ಸ್ವಾಮೀಜಿ ಜತೆ ತತ್‌ಕ್ಷಣ ಮಾತಾಡಬೇಕು. ಅವರ ಬಳಿ ಫೋನ್ ಕೊಡಿ’ ಎಂದು ಹೇಳಿದ್ದ. ಹಿರಿಯ ಅಧಿಕಾರಿ ಇರಬಹುದು ಎಂದು ನಂಬಿದ ಪೇದೆ ನೇರವಾಗಿ ಮಠಕ್ಕೆ ಹೋಗಿ ಸ್ವಾಮೀಜಿಗೆ ಮೊಬೈಲ್ ಫೋನ್ ಕೊಟ್ಟಿದ್ದಾನೆ. ಆಗ “ನಿನ್ನ ಮತ್ತು ಮಠದ ಮಾನ ಹರಾಜು ಹಾಕುತ್ತೇನೆ. ಚಿತ್ರದುರ್ಗ ಮುರುಘಾ ಶ್ರೀಗಳನ್ನು ಜೈಲಿಗೆ ಕಳುಹಿಸಿದಂತೆ ನಿನ್ನನ್ನೂ ಕಳುಹಿಸುತ್ತೇನೆ’ ಎಂದು ಹೆದರಿಸಿ ಸ್ವಾಮೀಜಿಯ ಮೊಬೈಲ್ ನಂಬರ್ ಪಡೆದಿದ್ದ ಎನ್ನಲಾಗಿದೆ.
ಪ್ರಕಾಶ್, ತನ್ನ ಜೀಪ್‌ಗೆ ಪೊಲೀಸ್ ಸ್ಟಿಕ್ಕರ್, ಕೆಂಪುದೀಪ, ವಾಕಿಟಾಕಿ ಎಲ್ಲವನ್ನೂ ಅಳವಡಿಸಿದ್ದ. ಇದನ್ನೆಲ್ಲ ನೋಡಿ, ಹಿರಿಯ ಪೊಲೀಸ್ ಅಧಿಕಾರಿಯೆಂದು ಸ್ವಾಮೀಜಿ ನಂಬಿದ್ದರು. ಸ್ವಾಮೀಜಿ ಸೆ. 16ರಂದು ವಿಧಾನ ಸೌಧದ ಹತ್ತಿರ 61 ಲಕ್ಷ ರೂ. ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಸೆ. 25ರಂದು ಮತ್ತೆ ಹಣಕ್ಕಾಗಿ ಬೆದರಿಸಿದಾಗ ಸ್ವಾಮೀಜಿ ಸೆನ್ ಠಾಣೆಗೆ ದೂರು ನೀಡಿದ್ದರು.