ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಭಾನುವಾರ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿನ ಆಲಮ್ಮ ಛತ್ರದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವಾರ್ಡ್ ಸಭೆ ಹೆಸರಿನಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಪರವಾಗಿ ಸುಮಾರು 1 ಸಾವಿರ ಮಂದಿಗೆ ಮಟನ್ ಕುರ್ಮಾ, ಮಟನ್ ಚಾಪ್ಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್ ಸೇರಿದಂತೆ ಭರ್ಜರಿ ಬಾಡೂಟ ಹಾಕಿಸಲಾಯಿತು.
ವಿಶ್ರಾಂತ ಕುಲಪತಿ ಪೊ›.ಕೆ.ಎಸ್.ರಂಗಪ್ಪ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ನಗರಪಾಲಿಕೆ ಸದಸ್ಯರುಗಳಾದ ಶೈಲೇಂದ್ರ, ಬಾಲು, ಆರ್.ಲಿಂಗಪ್ಪ ಸೇರಿದಂತೆ ಜೆಡಿಎಸ್‌ನ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, “ಇದು ನಾನು ಆಯೋಜಿಸಿದ ಕಾರ್ಯಕ್ರಮವಲ್ಲ. ಅತಿಥಿಯಾಗಿ ಭಾಗವಹಿಸಿದ್ದೆ ಅಷ್ಟೆ. ಇದೊಂದು ಸಣ್ಣ ಕಾರ್ಯಕ್ರಮ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಮನವಿ ಮಾಡಿದರು.
ಎಂ.ಜೆ.ರವಿಕುಮಾರ್ ಪ್ರತಿಕ್ರಿಯೆ ನೀಡಿ, “ಮೈಸೂರು ಮಹಾನಗರಪಾಲಿಕೆ ಮೇಯರ್ ಆಗಿದ್ದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನನ್ನ ವಾರ್ಡ್ ಜನರಿಗೆ ಸಂತೋಷ ಕೂಟ ಏರ್ಪಡಿಸಿದ್ದೇನೆ. ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.