ಬೆಂಗಳೂರು: ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಹಾಗೂ ರಾಯಚೂರು ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಂಡು ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್ ಚುನಾವಣಾ ಆಯೋಗ ಹಾಗೂ ಸ್ಪೀಕರ್‌ಗೆ ಪತ್ರ ಬರೆದಿದೆ.
ತಾಂತ್ರಿಕವಾಗಿ ಇನ್ನೂ ಜೆಡಿಎಸ್ ಶಾಸಕರಾಗಿದ್ದರೂ ಬಿಜೆಪಿ ಸೇರ್ಪಡೆಗೊಂಡಿರುವ ಕಾರಣ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಟಿ.ಎ.ಶರವಣ, ಇಬ್ಬರೂ ಶಾಸಕರ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಹಾಗೂ ವಿಧಾನಸಭೆ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ಆಯ್ಕೆಯಾಗಿ ಅಧಿಕಾರ ಅನುಭವಿಸಿ ಅಂತಿಮ ದಿನಗಳಲ್ಲಿ ಸದನ ಸ್ಥಾನಕ್ಕೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸದೇ ಅಧಿಕೃತವಾಗಿ ಬಿಜೆಪಿ ಸೇರಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಹೀಗಾಗಿ, ಇದು ಪಕ್ಷ ವಿರೋಧಿ ಕ್ರಮ. ಇವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇಬ್ಬರೂ ಶಾಸಕರು ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ನೀಡಿ ರಾಜೀನಾಮೆ ನೀಡಿಲ್ಲ. ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಷ್ಟರಲ್ಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದು, ಭಾರತದ ಸಂವಿಧಾನದ 52 ನೇ ತಿದ್ದುಪಡಿಯ 10ನೇ ಅನುಸೂಚಿಯ ಸ್ಪಷ್ಟ ಉಲ್ಲಂಘನೆ. ಸಂವಿಧಾನದ ಅನುಚ್ಛೇದ 105 ಮತ್ತು 194ರಡಿ ಸೂಕ್ತ ಕ್ರಮ ಕೈಗೊಳ್ಳಲು ಸಭಾಧ್ಯಕ್ಷರಿಗೆ ಅಧಿಕಾರವಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 9ರಡಿ ಸದನ ಸದಸ್ಯತ್ವದಿಂದ ಅನರ್ಹಗೊಳಿಸಿ ಐದು ವರ್ಷ ಚುನಾವಣೆಗೆ ನಿಲ್ಲುವುದನ್ನು ನಿರ್ಬಂಧಿಸಬಹುದಾಗಿದೆ ಎಂದು ಹೇಳಿದರು.