Advertisement

JDS: ಜೆಡಿಎಸ್‌ನಿಂದ ಇಬ್ರಾಹಿಂ, ನಾಣು ಉಚ್ಚಾಟನೆ

11:10 PM Dec 09, 2023 | Team Udayavani |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಕೆ.ನಾಣು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

Advertisement

ಸಿ.ಕೆ.ನಾಣು ಅವರು ಡಿ.11 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ. ಅದರಲ್ಲಿ ದೇಶದ ವಿವಿಧ ರಾಜ್ಯ ಘಟಕದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿಕೊಂಡಿದ್ದರು. ಸಭೆಗೂ ಮೊದಲೇ ಇಬ್ಬರನ್ನೂ ಉಚ್ಚಾಟಿಸಲಾಗಿದೆ.

ಜೆಡಿಎಸ್‌ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆ ಬಳಿಕ ಈ ವಿಷಯ ತಿಳಿಸಿದ ಎಚ್‌.ಡಿ.ದೇವೇಗೌಡರು, ಇಬ್ಬರು ನಾಯಕರ ಉಚ್ಚಾಟನೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಇಬ್ರಾಹಿಂ ಅವರ ಸಮ್ಮುಖದಲ್ಲಿಯೇ ಕೈಗೊಳ್ಳಲಾಯಿತು. ಆದರೆ ಅವರು ಆ ಬಳಿಕ ನಿರ್ಧಾರವನ್ನು ವಿರೋಧಿಸಿ, ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರ ನಡೆಸಿದರು. ಇದರಿಂದ ಪಕ್ಷದ ವರ್ಚಸ್ಸು, ಹಿತಕ್ಕೆ ಧಕ್ಕೆ ಆಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದೇವೇಗೌಡರು ವಿವರಿಸಿದರು.

Advertisement

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೀವಂತ ಇರುವಾಗಲೇ ನಾಣು ಅವರು ಪರ್ಯಾಯ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದರು. ಇಬ್ರಾಹಿಂ ತಮ್ಮ ಜತೆ ಐದು ಮಂದಿ ಶಾಸಕರು ಮತ್ತು ಹಲವು ಮುಖಂಡರಿದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಮೊಬೈಲ್‌ನಲ್ಲಿ ಇಬ್ರಾಹಿಂ ಮತ್ತು ತಾವು ಹಾಗೂ ಹಲವು ನಾಯಕರಿರುವ ಚಿತ್ರವೊಂದನ್ನು ಪ್ರದರ್ಶಿಸಿ, ಇದರಲ್ಲಿ ನಾನು ಮತ್ತು ಇಬ್ರಾಹಿಂ ಅವರು ಮಾತ್ರ ಜೀವಂತ ಇದ್ದೇವೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌ ಅವರು, ಇಬ್ರಾಹಿಂ ಅವರನ್ನು ಹಾಗೂ ಪಶ್ಚಿಮ ಬಂಗಾಲ ಜೆಡಿಎಸ್‌ ಘಟಕದ ಅಧ್ಯಕ್ಷ ಪುನೀತ್‌ ಕುಮಾರ ಸಿಂಗ್‌ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕೇರಳದ ಸಿ.ಕೆ.ನಾಣು ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಣಯವನ್ನು ಕಾರ್ಯಕಾರಿಣಿ ಸಭೆಯಲ್ಲಿ ಮಂಡನೆ ಮಾಡಿದ್ದರು.

ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಕೋರ್‌ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಶಿವಕುಮಾರ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುÇÉಾ ಖಾನ್‌, ಪಶ್ಚಿಮ ಬಂಗಾಲ, ಹರಿಯಾಣ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಮಹಾರಾಷ್ಟ್ರ, ಗುಜರಾತ್‌, ಬಿಹಾರ, ತಮಿಳುನಾಡು ರಾಜ್ಯಗಳ ಮುಖಂಡರು ಆಗಮಿಸಿದ್ದರು. ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್‌-ಬಿಜೆಪಿ ಮೈತ್ರಿಯನ್ನು ವಿರೋಧಿಸಿದ್ದರು. ಪಕ್ಷದ ಹಿರಿಯ ನಾಯಕರು ಬಂಡಾಯ ಶಮನಗೊಳಿಸುವ ಪ್ರಯತ್ನ ನಡೆಸಿದ್ದರೂ ಸಹ ಅದಕ್ಕೆ ಸೊಪ್ಪು ಹಾಕದ ಇಬ್ರಾಹಿಂ, ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆ ಸ್ಥಾನಕ್ಕೆ ತಮ್ಮ ಪುತ್ರ, ಎಚ್‌.ಡಿ. ಕುಮಾರಸ್ವಾಮಿ ಅವರನ್ನು ದೇವೇಗೌಡ ನೇಮಕ ಮಾಡಿದ್ದರು. ಈಗ ಇಬ್ರಾಹಿಂ ಅವರ ಉಚ್ಚಾಟನೆಗೆ ರಾಷ್ಟ್ರೀಯ ಕಾರ್ಯಾಕಾರಿಣಿಯು ಅಂಕಿತ ಹಾಕಿದೆ.

ಎಚ್‌ಡಿಡಿ ಕ್ಷಿಪ್ರ ನಡೆ
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಕೆ.ನಾಣು ಮತ್ತು ಸಿ.ಎಂ. ಇಬ್ರಾಹಿಂ ಅವರು ಸೋಮವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಕರೆದಿದ್ದರು. ನಮ್ಮ ಜತೆ ಹಲವು ಜೆಡಿಎಸ್‌ ಶಾಸಕರು, ಮುಖಂಡರಿದ್ದಾರೆ ಎಂದು ಇಬ್ರಾಹಿಂ ಪ್ರತಿಪಾದಿಸಿದ್ದರು. ಇದನ್ನು ಗಮನಿಸಿದ ದೇವೇಗೌಡರು ಎರಡು ದಿನ ಮುಂಚಿತವಾಗಿಯೇ ರಾಷ್ಟ್ರೀಯ ಕಾರ್ಯಕಾರಿಣಿ ಕರೆದು ಬಂಡಾಯ ನಾಯಕರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next