Advertisement

ಜೆಡಿಎಸ್‌ ಅತೃಪ್ತರಿಂದ ಪಕ್ಷಾಂತರ ಪರ್ವಕ್ಕೆ ನಾಂದಿ

10:22 AM Mar 09, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಪತನದ ಅನಂತರ “ಜೆಡಿಎಸ್‌ ಮನೆ’ಯಿಂದ ಪ್ರಮುಖ ನಾಯಕರು ನಿರ್ಗಮನ ಪಥ ಸಂಚಲನ ಆರಂಭಿಸಿದ್ದಾರೆ.

Advertisement

ಶಾಸಕ ಜಿ.ಟಿ.ದೇವೇಗೌಡರು ಪಕ್ಷಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮಾನಸಿಕವಾಗಿ ಬಿಜೆಪಿಯತ್ತ ವಾಲಿದ್ದರೆ ನಾನೂ ಪಕ್ಷದಲ್ಲಿದ್ದೂ ನಿಷ್ಕ್ರಿಯ ಕಾರ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ಮಧು ಬಂಗಾರಪ್ಪ ಅವರು ಬಹುತೇಕ ಪಕ್ಷ ಬಿಡುವ ಹಾದಿಯಲ್ಲೇ ಸಾಗಿದ್ದಾರೆ.

ಇಷ್ಟೇ ಅಲ್ಲದೆ ಸದ್ಯದಲ್ಲೇ ತುಮಕೂರು ಜಿಲ್ಲೆಯ ಹಾಲಿ ಶಾಸಕ, ವಿಧಾನಪರಿಷತ್‌ ಸದಸ್ಯರೊಬ್ಬರ ಸಹಿತ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೆ ವೇದಿಕೆ ಸಿದ್ಧಗೊಂಡಿದೆ. ಗುಬ್ಬಿ ಶ್ರೀನಿವಾಸ್‌ ಮತ್ತು ಬೆಮೆಲ್‌ ಕಾಂತರಾಜ್‌ ಅವರ ಹೆಸರೂ ಕೇಳಿಬರುತ್ತಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ಅಥವಾ ಬಿಜೆಪಿಯಲ್ಲಿ ಟಿಕೆಟ್‌ ಭದ್ರಪಡಿಸಿಕೊಂಡು ಪಕ್ಷ ಬಿಡುವ ಬಗ್ಗೆ ಹಲವರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತ್ತ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾದ ಬೆನ್ನಲ್ಲೇ ಇತ್ತ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಇದೇ ರೀತಿಯ ಯೋಚನೆಯಲ್ಲಿ ಇನ್ನೂ ಹಲವರಿದ್ದಾರೆ. ಬಿಜೆಪಿಯಿಂದ ಗ್ರೀನ್‌ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

ಪಕ್ಷ ಸಂಘಟನೆ ಮಾಡುತ್ತಿಲ್ಲ, ಎರಡನೇ ಹಂತದ ನಾಯಕರನ್ನು ಬೆಳೆಸುತ್ತಿಲ್ಲ, ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಹಿತ ಪ್ರಮುಖ ಹುದ್ದೆಗಳನ್ನು ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರಿಗೆ ನೀಡಲಿಲ್ಲ. ಸಂಕಷ್ಟದಲ್ಲಿ ಪಕ್ಷದ ಜತೆ ಇದ್ದವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಲಾಯಿತು ಎಂಬುದು ಪಕ್ಷ ಬಿಡಲು ಮುಂದಾಗಿರುವವರ ವಾದ.

Advertisement

ವರಿಷ್ಠರಿಗೆ ತಲೆನೋವು
ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿರುವ ಬೆನ್ನಲ್ಲೇ ಕೆಲವರು ಪಕ್ಷದಲ್ಲಿದ್ದೂ ನಿಷ್ಕ್ರಿಯರಾಗಿರುವುದು, ಮತ್ತೆ ಕೆಲವರು ಪಕ್ಷ ತ್ಯಜಿಸಲು ಮುಂದಾಗಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಜೆಡಿಎಸ್‌ಗೆ ರಮೇಶ್‌ ಬಾಬು ಗುಡ್‌ ಬೈ
ದಾವಣಗೆರೆ: ಜಾತ್ಯತೀತ ಜನತಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ವಕ್ತಾರ, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ತಮ್ಮ ಎರಡೂ ಸ್ಥಾನಗಳಿಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಜೆಡಿಎಸ್‌ಗೆ “ಗುಡ್‌ ಬೈ’ ಹೇಳಿದ್ದಾರೆ.ಜನತಾ ಪಕ್ಷ, ಜನತಾ ಪರಿವಾರ ಮತ್ತು ಜೆಡಿಎಸ್‌ನೊಂದಿಗೆ ಸುದೀರ್ಘ‌ ಕಾಲದ ಒಡನಾಟ ಹೊಂದಿದ್ದ ತಾನು, ಪಕ್ಷದಲ್ಲಿನ ಬೆಳವಣಿಗೆಯಿಂದ ಬೇಸರಗೊಂಡು ಈ ತೀರ್ಮಾನ ಕೈಗೊಂಡಿರುವುದಾಗಿ ರಮೇಶ್‌ ಬಾಬು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷಕ್ಕೆ ನಾಯಕರು ಬರುತ್ತಾರೆ, ಹೋಗುತ್ತಾರೆ, ಯಾರೂ ಅನಿವಾರ್ಯವಲ್ಲ. ಲಕ್ಷಾಂತರ ಪ್ರಾಮಾಣಿಕ ಕಾರ್ಯಕರ್ತರೇ ನಮ್ಮ ಪಕ್ಷ ಆಸ್ತಿ. ಹೀಗಾಗಿ ಹೋಗುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಇರುವವರ ಜತೆಗೂಡಿ ಪಕ್ಷ ಕಟ್ಟಲಾಗುವುದು. ಜೆಡಿಎಸ್‌ಗೆ ಇಂಥ ಸವಾಲುಗಳು ಹೊಸದೇನಲ್ಲ.
 -ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

 - ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next