Advertisement

ಮೈತ್ರಿಗೆ ಭಂಗವಾಗದಂತೆ ಸ್ಪರ್ಧೆಗೆ ಜೆಡಿಎಸ್‌ ತೀರ್ಮಾನ

06:10 AM Aug 11, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರ ಇದ್ದರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವುದರಿಂದ ಮೈತ್ರಿಗೆ ಭಂಗವಾಗದಂತೆ ಸೌಹಾರ್ದಯುತ ಸ್ಪರ್ಧೆಗೆ ಜೆಡಿಎಸ್‌ ಆದ್ಯತೆ ನೀಡಿದೆ.

Advertisement

ಆದರೆ, ಚುನಾವಣಾ ಪ್ರಚಾರದ ವೇಳೆ ಜೆಡಿಎಸ್‌ ಪ್ರಣಾಳಿಕೆಯಂತೆ ಸರ್ಕಾರ ಕೈಗೊಂಡಿರುವ ಸಾಲ ಮನ್ನಾ, ಹಿರಿಯ ನಾಗರಿಕರ ಗೌರವಧನ ಹೆಚ್ಚಳ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮತ್ತು ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ‌ವಾಗಿ ಚರ್ಚಿಸಲಾಗಿದೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಭೆಗೆ ಆಗಮಿಸದ ಕಾರಣ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದೆ ಮತ್ತೂಮ್ಮೆ ಸಭೆ ಕರೆಯಲು ತೀರ್ಮಾನಿಸಲಾಗಿದೆ.

ದೋಸ್ತಿ ಬಗ್ಗೆ ಟೀಕೆ ಬೇಡ:
ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಪ್ರತಿಪಕ್ಷ ಬಿಜೆಪಿ ನಮ್ಮ ಮೊದಲ ಗುರಿಯಾಗಿರಬೇಕು. ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ಅಭಿಯಾನ ನಡೆಸಬೇಕು. ಶೀಘ್ರದಲ್ಲೇ ಲೋಕಸಭೆ ಚುನಾವಣೆ ಬರಲಿದ್ದು, ಅಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ. ಹೀಗಾಗಿ ದೋಸ್ತಿ ಪಕ್ಷ ಕಾಂಗ್ರೆಸ್‌ ಬಗ್ಗೆ ಯಾವುದೇ ಗಂಭೀರ ಆರೋಪ ಅಥವಾ ಟೀಕೆಗೆ ಆಸ್ಪದ ನೀಡಬಾರದು ಎಂದು ಪಕ್ಷದ ಮುಖಂಡರಿಗೆ ವರಿಷ್ಠರು ಸೂಚನೆ ನೀಡಿದ್ದಾರೆ.

ಒಂದೊಮ್ಮೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕಣದಲ್ಲಿ ಜಿದ್ದಾಜಿದ್ದಿಗೆ ಇಳಿಯದೆ ಆ ಪಕ್ಷದ ಮುಖಂಡರು ಅಥವಾ ಅಭ್ಯರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆಯೂ ತಿಳಿಹೇಳಿದ್ದಾರೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಜಿಲ್ಲಾ ಘಟಕಗಳು ಮತ್ತು ತಾಲೂಕು ಘಟಕಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಅನೇಕ ಜಿಲ್ಲೆಗಳಲ್ಲಿ ಸ್ಥಳೀಯ ಘಟಕಗಳು ಕ್ರಿಯಾಶೀಲವಾಗಿಲ್ಲ. ಹೀಗಾಗಿ ಅಂತಹ ಜಿಲ್ಲೆಗಳಲ್ಲಿ‌ ಶಾಸಕರು, ಮಾಜಿ ಶಾಸಕರು ಇಲ್ಲವೇ ಮುಖಂಡರು ಸ್ಥಳೀಯ ಘಟಕಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇಡೀ ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದೂ ಸಲಹೆ ಮಾಡಿದ್ದಾರೆ.

Advertisement

ಆರತಿ ಬೆಳಗಿಸಿ ಸ್ವಾಗತ:
ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಳ್ಳಲು ಜೆಡಿಎಸ್‌ ಕಚೇರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರನ್ನು ಪಕ್ಷದ ಮಹಿಳಾ ಘಟಕದ ಕಾರ್ಯಕರ್ತೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರಲ್ಲದೆ, ಮೈಸೂರು ಪೇಟಾ ತೊಡಿಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next